ಖರ್ಗೆ ಮಾತುಕತೆ ನಡೆಸಲಿ

joshi MP
Published on

ಹುಬ್ಬಳ್ಳಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ-ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಯಾಕೆ ಮಾತನಾಡಿಲ್ಲ? ಎಲ್ಲದಕ್ಕೂ ಪ್ರಧಾನಿ ಮೋದಿ ಅವರ ಮೇಲೆ ಗೂಬೆ ಕೂರಿಸುವುದೇ ಇವರ ಕೆಲಸ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹರಿಹಾಯ್ದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎನ್​ಡಿಐಎ ಮೈತ್ರಿ ಕೂಟದ ನಾಯಕರು ಖರ್ಗೆ. ಹೀಗಿರುವಾಗ ಅವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಮಾತನಾಡಲಿ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನೀರು ಹರಿಸಲು ತಮಿಳುನಾಡು ಮುಖ್ಯಮಂತ್ರಿ ಅವರಲ್ಲಿ ಸಮಯಾವಕಾಶ ಕೇಳಬಹುದಿತ್ತು. ಇಬ್ಬರಿಗೂ ದಿನ ಬೆಳಗಾದರೆ ಮೋದಿ ಅವರನ್ನು ಬೈಯ್ಯುವುದೇ ಕೆಲಸವಾಗಿದೆ ಎಂದರು.

ನಾವು ಕೇಂದ್ರದಿಂದ ಎಲ್ಲ ಸಹಕಾರ ಕೊಟ್ಟಿದ್ದೇವೆ. ಮುಂದೆಯೂ ಕೊಡುತ್ತೇವೆ. ಬರಗಾಲದ ವಿಚಾರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವುದು ಸಂತೋಷದ ಸಂಗತಿ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​ಗೆ ಯಾವ ಕ್ಷೇತ್ರ, ಎಷ್ಟು ಸ್ಥಾನ ಎಂಬುದು ಇದುವರೆಗೂ ನಿರ್ಧಾರವಾಗಿಲ್ಲ. ಪಕ್ಷದ ವರಿಷ್ಠರು ರಾಜ್ಯ ಬಿಜೆಪಿ ನಾಯಕರೊಂದಿಗೆ ರ್ಚಚಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ನಮಗೆ ಎನ್​ಡಿಎ ಹೆಸರು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಯಾಕೆಂದರೆ ನಮ್ಮಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಇಲ್ಲ.

ಯುಪಿಎ ಮೇಲೆ 12 ಲಕ್ಷ ಕೋಟಿ ರೂ.ಗಳ ಭ್ರಷ್ಟಾಚಾರದ ಆರೋಪ ಇದೆ. ಆ ಕಾರಣಕ್ಕೆ ಅವರ ಮೈತ್ರಿಕೂಟದ ಹೆಸರು ಬದಲಾವಣೆ ಆಗಿದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net