

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಾರ್ವಜನಿಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಬ್ಲಾಕಚೈನ್ ಮತ್ತು ಕೃತಕ ಬುದ್ಧಿಮತ್ತೆ ನೀತಿಯು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು ಹೇಳಿದರು.
ಕೆಎಲ್ಇ ಸಂಸ್ಥೆಯ ಇಲ್ಲಿಯ ಜಿ.ಕೆ. ಕಾನೂನು ಕಾಲೇಜಿನಲ್ಲಿ ಗುರುವಾರ ‘ಬ್ಲಾಕ್ ಚೈನ್ ಮತ್ತು ಕೃತಕ ಬುದ್ಧಿಮತ್ತೆ-ನೈತಿಕ ಕಾನೂನು ದೃಷ್ಟಿಕೋನ’ ವಿಷಯ ಕುರಿತು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು,
ಬ್ಲಾಕಚೈನ್ ಮತ್ತು ಕೃತಕ ಬುದ್ಧಿಮತ್ತೆ ನೀತಿಯು ಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ತಂತ್ರಜ್ಞಾನದ ನೆರವಿಲ್ಲದೇ ಮಾನವನು ಸಮಾಜದಲ್ಲಿ ಸುಗಮವಾಗಿ ಜೀವನ ನಡೆಸಲು ಅಸಾಧ್ಯವಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಬ್ಲಾಕಚೈನ್ ಮತ್ತು ಕೃತಕ ಬುದ್ಧಿಮತ್ತೆಯಿಂದ ಬೇಗನೇ ಇತ್ಯರ್ಥಪಡಿಸಲು ಸಾಧ್ಯವಾಗಬಹುದು ಎಂದು ಅಭಿಪ್ರಾಯಿಸಿದರು.
ಹೈದರಾಬಾದ್ನ ಗಾಲ್ಟರ್ ಸಂಸ್ಥೆಯ ಸಂಸ್ಥಾಪಕ ಡಾ. ಎಂ. ಕೆ. ಭಂಡಾರಿ, ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಸಚಿವ ಡಾ. ಬಿ. ಎಸ್. ಅನಾಮಿ ಮಾತನಾಡಿದರು. ಆಸ್ಟ್ರೇಲಿಯಾದ ನ್ಯೂ ಸೌತ್ವೇಲ್ಸ್ನ ಸಾಲಿಸಿಟರ್ ಡಾ. ಚಂದ್ರಿಕಾ ಸುಬ್ರಮಣಿಯನ್, ನೈಜಿರಿಯಾದ ಅಮನ ಅಲ್ಕಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಡಾ. ಶಾರದಾ ಪಾಟೀಲ ಪರಿಚಯಿಸಿದರು. ಪ್ರಾಚಾರ್ಯ ಡಾ. ಜ್ಞಾನೇಶ್ವರ ಚೌರಿ ವಂದಿಸಿದರು. ಸಂಜೀವ ಹುಲ್ಲೂರ, ಪ್ರೊ. ಕವಿತಾ ಬೆಳಗಲಿ, ಪ್ರೊ. ಸ್ವಪ್ನಾ ಸೊಮಯಾಜಿ, ಪ್ರೀತಿ ಕಸ್ತೂರಿ, ಸತೀಶ ನಾಶಿಪುಡಿ, ಡಾ. ಬಾಹುಬಲಿ ಕುರಕುರಿ, ಇತರರು ಇದ್ದರು.