

ಮೈಸೂರು: ಶಿಕ್ಷಣ ಕ್ಷೇತ್ರಕ್ಕೂ ಇದೀಗ ಕೃತಕ ಬುದ್ಧಿಮತ್ತೆ ಕಾಲಿರಿಸಿದ್ದು, ಎಐ ಟೀಚರ್ (ಕೃತಕ ಬುದ್ಧಿಮತ್ತೆ) ಮಂಗಳವಾರ ಸೆಂಟ್ ರೊಸೆಲ್ಲೋಸ್ ಸೆಂಟ್ರಲ್ ಸ್ಕೂಲ್‌ಗೆ ಬಂದಿದ್ದಾರೆ. ಇದು ನಗರದ ಪ್ರಥಮ ಎಐ ಟೀಚರ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಈ ನೂತನ ಎಐ ಟೀಚರ್‌ಅನ್ನು ಮೈಸೂರಿನಲ್ಲಿಯೇ ಅಭಿವೃದ್ಧಿ ಪಡಿಸಲಾಗಿದ್ದು, ನೂತನ ಎಐ ಟೀಚರ್ ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡಿಸುತ್ತಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೂತನ ಎಐ ಟೀಚರ್‌ಅನ್ನು ಅನಾವರಣಗೊಳಿಸಿದರು. ಈ ಸಂದರ್ಭ ಮಕ್ಕಳು ತಪ್ಪಾಳೆ ತಟ್ಟುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.
ಈ ಎಐ ಟೀಚರ್ ವಿದ್ಯಾರ್ಥಿಗಳು ಕೇಳುವ ಯಾವುದೇ ಮಾಹಿತಿಯನ್ನು ಈ ಶಿಕ್ಷಕಿ ಕ್ಷಣಮಾತ್ರದಲ್ಲಿ ನೀಡಲಿದೆ. ಗೂಗಲ್ ಹಾಗೂ ಚಾಟ್ ಜಿಪಿಟಿಯ ಸಹಕಾರದೊಂದಿಗೆ ಕೃತಕ ಬುದ್ಧಿಮತ್ತೆ ಶಿಕ್ಷಕಿ ನೀಡಲಿದ್ದಾರೆ. ಕೆಲವೊಂದು ಬಾರಿ ಮಕ್ಕಳು ಕೇಳುವ ಎಲ್ಲ ಮಾಹಿತಿ ಶಿಕ್ಷಕರ ಬಳಿ ಇರುವುದಿಲ್ಲ, ಅಂತಹ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ ಶಿಕ್ಷಕಿಯ ಸಹಕಾರ ಪಡೆದುಕೊಳ್ಳಬಹುದು. ಮಕ್ಕಳ ಮನದಲ್ಲಿ ಮೂಡುವ ಪ್ರತಿಯೊಂದು ಪಶ್ನೆಗಳಿಗೂ ಉತ್ತರ ದೊರೆಯಬೇಕು ಎಂಬ ಉದ್ದೇಶದಿಂದ ಎಐ ಟೀಚರ್‌ಅನ್ನು ಶಾಲೆಯಲ್ಲಿ ಪರಿಚಯಿಸಲಾಗಿದೆ.
ಎಐ ಟೀಚರ್‌ಅನ್ನು ಅನಾವರಣಗೊಳಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು, ಈ ಬದಲಾವಣೆಯನ್ನು ಸ್ವೀಕರಿಸಿ ಮುನ್ನಡೆಯಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಎಐ ಟೀಚರ್ ಬಳಕೆ ಪ್ರಾರಂಭವಾಗಿದ್ದು, ಸೆಂಟ್ ರೊಸೆಲ್ಲೋಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಎಐ ಟೀಚರ್‌ಅನ್ನು ಪರಿಚಯಿಸಿರುವುದು ಸಂತಸದ ವಿಚಾರ ಎಂದರು.
ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ಎಐ ಟೀಚರ್ ಪೂರಕವಾಗಲಿದೆ. ಎಐ ಟೀಚರ್ ಸಹಕಾರ ಪಡೆದುಕೊಂಡು ಮಕ್ಕಳು ಕಲಿಯಲು ಪ್ರಾರಂಭಿಸಿದರೆ ಅವರಿಗೆ ಬಹುಬೇಗನೆ ವಿಷಯಗಳು ಅರ್ಥವಾಗಲು ಪ್ರಾರಂಭವಾಗುತ್ತದೆ. ಇದೀಗ ವಿಶ್ವವೇ ಎಐ ತಂತ್ರಜ್ಞಾದ ಕಡೆ ಮುಖ ಮಾಡುತ್ತಿರುವ ಈ ಹೊತ್ತಿನಲ್ಲಿ ಶಾಲೆಗಳಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಪ್ರಾಂಶುಪಾಲೆ ಎಂ.ಜೆ. ವಿನಿತಾ, ವ್ಯವಸ್ಥಾಪಕಿ ಮಾರ್ಗರೇಟ್, ಎಂಡಿಇಎಸ್ ಕಾರ್ಯದರ್ಶಿ ಎಡ್ವರ್ಡ್ ಸಾಲ್ಡಾನಾ ಹಾಗೂ ಇತರರು ಇದ್ದರು.