ಮಾಧ್ಯಮ ಲೋಕದಲ್ಲೂ ಎಐ ಕ್ರಾಂತಿ

AI revolution in the media world too
Published on

ಮಡಿಕೇರಿ:

ಪ್ರಸ್ತುತ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರಕ್ಕೂ ಕೃತಕ ಬುದ್ಧಿಮತ್ತೆ ಹೆಜ್ಜೆ ಇಟ್ಟಿದ್ದು ಇದರ ಒಳಿತು-ಕೆಡಕುಗಳ ಬಗ್ಗೆ ಅವಲೋಕನಗಳು ನಡೆಯಬೇಕಿದೆ ಎಂದು ಹಿರಿಯ ಪತ್ರಕರ್ತ ಜಿ. ರಾಜೇಂದ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೊಡಗು ವಿಶ್ವವಿದ್ಯಾನಿಲಯ ಮತ್ತು ಸ್ಥಳೀಯ ಪತ್ರಿಕಾ ಸಂಘಟನೆಗಳ ಸಹಕಾರದಲ್ಲಿ ಇಲ್ಲಿನ ಗಾಂಧಿ ಭವನದಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುದ್ದಿ ಸಂಪಾದನೆ, ವಿಶ್ಲೇಷಣೆ, ವಿವರಣೆ, ವಿಮರ್ಶೆ ಹೀಗೆ ವಿವಿಧ ರೀತಿಯಲ್ಲಿ ಅವಲೋಕನ ಮಾಡುವಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಉಪಯುಕ್ತವಾಗಿದ್ದರೂ ಉದ್ಯೋಗಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಆಧುನಿಕ ಜಗತ್ತು ಬೆಳೆದಂತೆ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ಬರುತ್ತಿದ್ದು, ಈ ಕುರಿತು ಸಾಧಕ ಬಾದಕಗಳ ಬಗ್ಗೆ ಅವಲೋಕಿಸಿ ಮಾಧ್ಯಮ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಆಡಳಿತ ಮತ್ತು ಸಮಾಜದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮತ್ತಷ್ಟು ವಸ್ತುನಿಷ್ಠ ಹಾಗೂ ಉತ್ತರಾದಾಯಿತ್ವವನ್ನು ಮಾಧ್ಯಮಗಳು ಹೊಂದಿರಬೇಕು. ಸಮಾಜದಲ್ಲಿನ ಒಳಿತು-ಕೆಡುಕುಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ.
ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬರೂ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಬದ್ಧತೆಯನ್ನು ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ರಾಷ್ಟçದಲ್ಲಿ 1780 ರಲ್ಲಿ ಬೆಂಗಾಲ್ ಗೆಜೆಟ್ ಆರಂಭವಾಗುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ಕಾಣಲಾಯಿತು. 1602 ರಲ್ಲಿ ಜರ್ಮನಿಯಲ್ಲಿ ಪತ್ರಿಕೆ ಆರಂಭಿಸಿದ್ದು ವಿಶ್ವದಲ್ಲಿ ಪ್ರಥಮವಾಗಿದೆ. ಮಾಧ್ಯಮಗಳು ಸರ್ಕಾರ ಮತ್ತು ಜನ ಸಾಮಾನ್ಯರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆ ನಿಟ್ಟಿನಲ್ಲಿ ವಿವಿಧ ಸಂದರ್ಭಗಳಲ್ಲಿ ಮಾಧ್ಯಮಗಳು ಜಿಲ್ಲಾಡಳಿತದ ಜೊತೆ ತುಂಬಾ ಸಹಕಾರ ನೀಡಿವೆ. ಕೊಡಗು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಮಾತನಾಡಿ ಮಾಧ್ಯಮಗಳು ಮತ್ತು ಪೊಲೀಸ್ ಇಲಾಖೆ ನಡುವೆ ಒಂದಕ್ಕೊAದು ಸಂಪರ್ಕ ಕೊಂಡಿಯಾಗಿದೆ. ಅಪರಾಧ ಸುದ್ದಿಗಳು ಸೇರಿದಂತೆ ಹಲವು ಮಾಹಿತಿಗಳನ್ನು ಮಾಧ್ಯಮಗಳ ಮೂಲಕ ಪೊಲೀಸರು ತಿಳಿದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ವದಂತಿಗಳಿಗೆ ಹೆಚ್ಚು ಮಹತ್ವ ನೀಡುತ್ತವೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಹಾಗೂ ಪ್ರತಿಯೊಬ್ಬರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು. ಸಮಾಜವನ್ನು ತಿದ್ದುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ ಎಂದರು.

ಕೊಡಗು ಪತ್ರಿಕಾ ಭವನ ಸ್ಥಾಪಕ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ ದೇಶದ ಐಕ್ಯತೆ ಮತ್ತು ಸ್ವಾತಂತ್ರö್ಯಕ್ಕಾಗಿ ಪತ್ರಿಕೋದ್ಯಮವನ್ನು ಹಿಂದಿನವರು ಆರಂಭಿಸಿದರು. ಆ ನಿಟ್ಟಿನಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೋರನ ಸರಸ್ವತಿ ಮಾತನಾಡಿ ಮಾಧ್ಯಮಗಳು ಪ್ರಜಾಪ್ರಭುತ್ವದಲ್ಲಿ ಕಾವಲುಗಾರರಾಗಿ ಕರ್ತವ್ಯ ನಿರ್ವಹಿಸುತ್ತವೆ. ಪ್ರಜೆಗಳು ಮತ್ತು ಪ್ರಭುಗಳ ನಡುವೆ ಸಮನ್ವಯತೆ ಕಾಯುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಚಿ.ನಾ. ಸೋಮೇಶ್ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗಗಳು ನಾಲ್ಕು ಆಧಾರ ಸ್ತಂಭವಾಗಿದ್ದು, ಭಾರತದ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಒಂದಕ್ಕೊAದು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಹಿರಿಯ ಪ್ರಕರ್ತ ಜಿ. ಚಿದ್ವಿಲಾಸ್, ಎಚ್.ಟಿ. ಅನಿಲ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ, ರೇವತಿ ರಮೇಶ್, ಕಡ್ಲೇರ ತುಳಸಿ ಮೋಹನ್, ಚೊಕ್ಕಾಡಿ ಪ್ರೇಮ ರಾಘವಯ್ಯ, ವೀಣಾಕ್ಷಿ, ಎಫ್‌ಎಂಸಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net