218 ರೈಲು ನಿಲ್ದಾಣಗಳಲ್ಲಿ ಎಐ ‘ಕಣ್ಣು ’

AI
Published on

ಆನಂದ ಅಂಗಡಿ ಹುಬ್ಬಳ್ಳಿ

ಅಪರಾಧಿ ಚಟುವಟಿಕೆಗಳ ಹಿನ್ನೆಲೆಯುಳ್ಳವರು ರೈಲು ನಿಲ್ದಾಣಕ್ಕೆ ಕಾಲಿಟ್ಟರೆ ಸಾಕು, ಅವರ ಭಾವಚಿತ್ರ ತಕ್ಷಣ ಆರ್‌ಪಿಎ್ (ರೈಲ್ವೆ ರಕ್ಷಣಾ ಪಡೆ) ಠಾಣೆಗೆ ರವಾನೆಯಾಗುತ್ತದೆ. ಯಾವುದಾದರೂ ವಸ್ತು ಗಂಟೆಗಟ್ಟಲೇ ಒಂದೇ ಸ್ಥಳದಲ್ಲಿದ್ದರೆ, ಯಾರಾದರೂ ರೈಲು ಹಳಿಗೆ ಅಥವಾ ಫ್ಲಾಟ್ ಫಾರ್ಮ್  ಬಿದ್ದರೆ ಕ್ಷಣ ಮಾತ್ರದಲ್ಲಿ ಅದರ ಮಾಹಿತಿಯ ವಿಡಿಯೋ ಹಾಗೂ ಫೋಟೋ ಆರ್‌ಪಿಎ್ ಸಿಬ್ಬಂದಿಗೆ ಸಿಗುತ್ತದೆ.

ಅಷ್ಟೇ ಅಲ್ಲ, ಶಂಕಿತ ವ್ಯಕ್ತಿಯನ್ನು ಪತ್ತೆ ಮಾಡಬೇಕಾದರೆ ಆತ ಧರಿಸಿದ ಬಟ್ಟೆಯ ಬಣ್ಣದಿಂದ ಆ ವ್ಯಕ್ತಿ ಅಥವಾ ಮಹಿಳೆ ಯಾವ ರೈಲು ನಿಲ್ದಾಣದಲ್ಲಿ ಇದ್ದಾರೆಂಬುದನ್ನು ಕ್ಷಣಮಾತ್ರದಲ್ಲಿ ಕಂಡು ಹಿಡಿಯಬಹುದು. ಎಲ್ಲ ರೈಲು ನಿಲ್ದಾಣಗಳಲ್ಲಿ ಅಳವಡಿಸುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಇನ್ನಿತರ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮರಾಗಳಿಂದ ಇದೆಲ್ಲ ಸಾಧ್ಯವಾಗಲಿದೆ. ನೈಋತ್ಯ ರೈಲ್ವೆ ವ್ಯಾಪ್ತಿಯ ಒಟ್ಟು 228 ರೈಲು ನಿಲ್ದಾಣಗಳಲ್ಲಿ ಎಐ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ನೈಋತ್ಯ ರೈಲ್ವೆಯ ಮೈಸೂರು ವಿಭಾಗ ವ್ಯಾಪ್ತಿಯ ನಿಲ್ದಾಣಗಳಲ್ಲಿ ಅಳವಡಿಕೆಯಾಗಿವೆ. ಬರುವ ಸೆಪ್ಟೆಂಬರ್ ಒಳಗಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ನಿಲ್ದಾಣಗಳಲ್ಲಿ ಅಳವಡಿಕೆಯಾಗಲಿವೆ.

ಭಾರತೀಯ ರೈಲ್ವೆ ಮೊದಲ ಬಾರಿಗೆ ಈ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕನ್ವರ್ಜ್ಡ ಕಮುನಿಕೇಶನ ಸಿಸ್ಟಮ್ (ಸಿಸಿಎಸ್) ಸ್ಥಾಪಿಸಲು ಮುಂದಾಗಿದೆ. ಸಿಸಿಟಿವಿಯಿಂದ ಭಾವಚಿತ್ರ, ಧ್ವನಿ, ವಿಡಿಯೋ, ಡೇಟಾ ಸೇವೆಗಳನ್ನು ಒಂದೇ ನೆಟ್‌ವರ್ಕ್‌ಗೆ ಸಂಯೋಜಿಸಲಾಗುತ್ತಿದೆ.

ಇದಕ್ಕಾಗಿ ನೈಋತ್ಯ ರೈಲ್ವೆ ವಲಯ 55 ಕೋಟಿ ರೂ. ವೆಚ್ಚ ಮಾಡುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆ ಅಡಿ 5.94 ಕೋಟಿ ರೂ.ಗಳ ವೆಚ್ಚದಲ್ಲಿ ಎ ಮತ್ತು ಬಿ ಕೆಟಗೆರಿಯ ಹುಬ್ಬಳ್ಳಿ ವಿಭಾಗದ 5, ಮೈಸೂರು ವಿಭಾಗದ 4 ಹಾಗೂ ಬೆಂಗಳೂರು ವಿಭಾಗದ 5 ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮರಾ, ಸರ್ವರ್ ಅಳವಡಿಸಲಾಗುತ್ತಿದೆ. ಇನ್ನುಳಿದ 214 ಸಿ ಮತ್ತು ಡಿ ಕೆಟಗೆರಿಯ ನಿಲ್ದಾಣಗಳಲ್ಲಿಯೂ ಕ್ಯಾಮರಾ ಹಾಗೂ ಸರ್ವರ್‌ಗಳನ್ನು ಅಳವಡಿಸಲಾಗುತ್ತಿದೆ.

ರೈಲು ನಿಲ್ದಾಣಗಳಲ್ಲಿ ಪ್ಯಾನ್‌ಟಿಲ್‌ಜೂಮ್ (ಪಿಟಿಜಡ್) ಸಾಮರ್ಥ್ಯವಿರುವ 2,784 ಹೈ ಡೆಫಿನಿಷನ್ ಕ್ಯಾಮರಾಗಳನ್ನು ಹಾಗೂ 4ಕೆ ಅಲ್ಟ್ರಾ ಎಚ್‌ಡಿ ಬುಲೆಟ್ ಕ್ಯಾಮರಾಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗುತ್ತಿದೆ. ಈ ಕ್ಯಾಮರಾಗಳು ಕೃತಕ ಬುದ್ಧಿಮತ್ತೆ ಸಹಾಯದಿಂದ ಫೇಸ್ ರೆಕಗ್ನಿಷನ್ ಸಿಸ್ಟಮ್ (ಎ್ಆರ್‌ಎಸ್), ವಿಡಿಯೋ ಅನಾಲಿಟಿಕ್ಸ್ (ವಿಎ) ಹಾಗೂ ಕೇಂದ್ರೀಕೃತ ವಿಡಿಯೋ ಮ್ಯಾನೇಜ್ಮೆಂಟ್ ಸಿಸ್ಟಮ್ (ವಿಎಂಎಸ್) ನೊಂದಿಗೆ ಕಾರ್ಯನಿರ್ವಹಿಸುತ್ತವೆ. ಎಲ್ಲ ಡೇಟಾವನ್ನು ವಿಭಾಗೀಯ ಹಾಗೂ ವಲಯ ಮಟ್ಟದ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.

ಈ ಹೊಸ ಸಿಸಿಟಿವಿ ಕ್ಯಾಮರಾಗಳು ಹಳೆಯ ತಂತ್ರಜ್ಞಾನದ ಕ್ಯಾಮರಾಗಳಿಗಿಂತ ಹೆಚ್ಚು ಕಾರ್ಯಕ್ಷಮತೆ ಹೊಂದಿವೆ. ಸರ್ವರ್ ಮಿನಿಸ್ಟರಿ ಆ್ ಇಲೆಕ್ಟ್ರಾನಿಕ್ ಆ್ಯಂಡ್ ಇನ್‌ಾರ್ಮೇಶನ್ ಟೆಕ್ನಾಲಜಿ ಸರ್ವರ್‌ನೊಂದಿಗೆ ಸಂಪರ್ಕ ಹೊಂದಿವೆ.

ಆರೋಪಿಗಳನ್ನು ವಶಕ್ಕೆ ಪಡೆಯಲು ಸಹಕಾರಿ

ಯಾವುದೇ ರಾಜ್ಯದ ಅಪರಾಧಿ ಚಟುವಟಿಕೆಗಳ ಹಿನ್ನೆಲೆಯ ವ್ಯಕ್ತಿಗಳು ರೈಲು ನಿಲ್ದಾಣಗಳಿಗೆ ಕಾಲಿಡುವ ಮುನ್ನ ಹತ್ತಾರು ಬಾರಿ ಯೋಚಿಸಬೇಕಾಗುತ್ತದೆ. ರೈಲು ನಿಲ್ದಾಣಗಳಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದರೂ ಅವರ ವಿಡಿಯೋ ಸರ್ವರ್‌ಗೆ ರವಾನೆಯಾಗುತ್ತದೆ. ಗಾಳಿ, ಮಳೆ ಸೇರಿದಂತೆ ಯಾವುದೇ ರೀತಿಯ ಅಡಚಣೆಗಳಿದ್ದರೂ ರೈಲು ನಿಲ್ದಾಣಗಳಲ್ಲಿರುವ ವ್ಯಕ್ತಿಗಳ ಮಾತುಗಳನ್ನು ಸ್ಪಷ್ಟವಾಗಿ ಈ ಕ್ಯಾಮರಾಗಳ ಮೂಲಕ ಕೇಳಿಸಿಕೊಳ್ಳಬಹುದಾಗಿದೆ.

ನಿರ್ದಿಷ್ಟ ಬಟ್ಟೆ ಧರಿಸಿದ್ದ ವ್ಯಕ್ತಿಯನ್ನು ಸಹ ಕ್ಷಣ ಮಾತ್ರದಲ್ಲಿ ಕಂಡುಹಿಡಿಯಬಹುದಾಗಿದೆ. ಉದಾಹರಣೆಗೆ ಬೆಂಗಳೂರು ರೈಲು ನಿಲ್ದಾಣದಲ್ಲಿ ಕೆಂಪು ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಶಂಕಾಸ್ಪದವಾಗಿ ಓಡಾಡುತ್ತ ರೈಲು ಹತ್ತಿದ್ದನೆಂದರೆ, ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಗಳು ಯಾವ ನಿಲ್ದಾಣದಲ್ಲಿ ಓಡಾಡುತ್ತಿದ್ದಾರೆ, ಯಾವ ನಿಲ್ದಾಣದಲ್ಲಿ ರೈಲು ಹತ್ತಿದರು, ಇಳಿದರು ಎಂಬೆಲ್ಲ ಮಾಹಿತಿ ಕ್ಷಣಮಾತ್ರದಲ್ಲಿ ಸರ್ವರ್ ರೂಮ್‌ನಲ್ಲಿರುವ ಎಲ್‌ಇಡಿ ಸ್ಕ್ರೀನ್ ಮೂಲಕ ನೋಡಬಹುದಾಗಿದೆ. ಈ ಹೊಸ ತಂತ್ರಜ್ಞಾನವುಳ್ಳ ಸಿಸಿಟಿವಿ ಕ್ಯಾಮರಾಗಳಿಂದ ಸಂಭವನೀಯ ಅಪರಾಧಗಳನ್ನು ತಡೆಯಲು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆಯಲು ಸಹಾಯವಾಗಿವೆ.

ಮೈಸೂರು ವಿಭಾಗದ ರೈಲು ನಿಲ್ದಾಣಗಳಲ್ಲಿ ಈ ಅತ್ಯಾಧುನಿಕ ಸಿಸಿಟಿವಿ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ರೈಲು ನಿಲ್ದಾಣಗಳಲ್ಲಿಯೂ ಶೀಘ್ರ ಈ ವ್ಯವಸ್ಥೆ ಅಳವಡಿಸಲಾಗುವುದು. ಬರುವ ಸೆಪ್ಟೆಂಬರ್ ವೇಳೆಗೆ ನೈಋತ್ಯ ರೈಲ್ವೆಯ ಎಲ್ಲ ಪ್ರಮುಖ ಹಾಗೂ ಇನ್ನಿತರ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಅಳವಡಿಕೆಯಾಗಲಿದೆ. ಡಾ. ಮಂಜುನಾಥ ಕನಮಡಿ, ಸಿಪಿಆರ್‌ಒ, ನೈಋತ್ಯ ರೈಲ್ವೆ ವಲಯ, ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net