ಅಹೋರಾತ್ರಿ ಮಹಾಧರಣಿಯ ಪೋಸ್ಟರ್ ಬಿಡುಗಡೆ

17
Published on

ಮೈಸೂರು: ಬೆಂಗಳೂರಿನಲ್ಲಿ ನ.26ರಿಂದ 28ರವರೆಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ನಡೆಯುವ ಮೂರು ದಿನಗಳ ಅಹೋರಾತ್ರಿ ಮಹಾ ಧರಣಿಯ ಪೋಸ್ಟರ್‌ಅನ್ನು ನಗರದ ಚಿಕ್ಕಗಡಿಯಾರದ ಆವರಣದಲ್ಲಿ ಶುಕ್ರವಾರ ಬಿಡುಗಡೆಗೊಳಿಸಲಾಯಿತು.

ಸಮಿತಿ ಸಂಚಾಲಕ ಎನ್.ಕೆ.ದೇವದಾಸ್ ಮಾತನಾಡಿ, ಜೆಸಿಟಿಯು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಜಂಟಿಯಾಗಿ ಮೂರು ದಿನಗಳವರೆಗೆ ಅಹೋರಾತ್ರಿ ಮಹಾಧರಣಿ ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಮಾರು 29 ಕಾಯ್ದೆಗಳನ್ನು ರದ್ದುಪಡಿಸಿ 4 ಕೋಡ್‌ಗಳಾಗಿ ಜಾರಿಗೆ ತಂದಿರುವುದನ್ನು ಹಿಂತೆಗೆಯಬೇಕು. ಕಳೆದ ವರ್ಷ ದೆಹಲಿಯಲ್ಲಿ ನಡೆದ ಒಂದು ವರ್ಷದ ರೈತ ಹೋರಾಟವನ್ನು ಅಂತ್ಯಗೊಳಿಸಲು ಕೇಂದ್ರ ಸರ್ಕಾರ ನೀಡಿದ ಭರವಸೆಯಂತೆ ನಡೆದುಕೊಂಡು ರೈತರ ಕರಾಳ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿದ್ಯುಚ್ಛಕ್ತಿ ಬಿಲ್ ರದ್ದುಪಡಿಸಬೇಕು. ಕರ್ನಾಟಕದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ 12 ಗಂಟೆಗಳ ಕೆಲಸದ ಅವಧಿಯನ್ನು ಇಂದಿನ ಸರ್ಕಾರ ಚುನಾವಣಾ ಅವಧಿಯಲ್ಲಿ ನೀಡಿರುವ ಭರವಸೆಯಂತೆ ಹಿಂತೆಗೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕಾರ್ಮಿಕ ರೈತ ಸಂಘಟನೆಗಳು ಜಂಟಿಯಾಗಿ ಚಳವಳಿ ನಡೆಸುತ್ತಿವೆ. ಇದರ ಬಗ್ಗೆ ಮೈಸೂರಿನ ಜನತೆಗೆ ತಿಳಿಸಿ ಹೋರಾಟದಲ್ಲಿ ಭಾಗವಹಿಸಲು ಕರೆ ನೀಡಲು ಪೋಸ್ಟರ್ ಅಭಿಯಾನ ಆರಂಭಿಸಲಾಗಿದೆ ಎಂದರು.

ಮುಖಂಡರಾದ ಜಗದೀಶ್ ಸೂರ್ಯ, ಜಯರಾಂ, ಬಾಲಾಜಿ ರಾವ್, ಚಿಕ್ಕಣ್ಣೇಗೌಡ, ಚಂದ್ರಶೇಖರ್, ಸೋಮಶೇಖರರಾಜೇ ಅರಸ್, ರಾಮಕೃಷ್ಣ, ಯಶೋದರಾ, ಬಸವಯ್ಯ, ಜಗನ್ನಾಥ್ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net