ಯುಕೆಪಿ ಹಂತ-3 ಪೂರ್ಣಗೊಳಿಸಲು ಆಗ್ರಹಿಸಿ ಅಹೋರಾತ್ರಿ ಧರಣಿ; ಕಲ್ಲಿನಾಥ ಸ್ವಾಮೀಜಿ

KALLINATH SWAMIJI
ಕಲ್ಲಿನಾಥ ಸ್ವಾಮೀಜಿ, ದಿಗಂಬರೇಶ್ವರ ಮಠ, ಕೊಲ್ಹಾರ
Published on

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವುದು ಹಾಗೂ ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟವನ್ನು 524ರ ಬದಲಾಗಿ 522 ಮೀಟರ್‌ಗೆ ಮಾತ್ರ ಸೀಮಿತಿಗೊಳಿಸುವ ರಾಜ್ಯ ಸರ್ಕಾರದ ಉದ್ದೇಶ ಖಂಡಿಸಿ ಬಾಗಲಕೋಟೆ ನಗರದಲ್ಲಿ ಡಿ.3ರಂದು ಕೃಷ್ಣಾ ಮೇಲ್ದಂಡೆ ಯೋಜನಾ ಭಾದಿತ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಮತ್ತು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ತಿಳಿಸಿದರು.

ರಾಜ್ಯದ ಶೇ.68ರಷ್ಟು ಜಲಸಂಪನ್ಮೂಲ ಹೊಂದಿರುವ ಉತ್ತರ ಕರ್ನಾಟಕ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳು ಅನುಷ್ಠಾನಗೊಳ್ಳದ ಕಾರಣ ಈ ಭಾಗ ಅಭಿವೃದ್ಧಿಯಿಂದ ವಂಚಿತವಾಗಿದೆ. ಪ್ರಾದೇಶಿಕ ಅಸಮಾನತೆ ಹೊಗಲಾಡಿಸಲು ಈ ಪ್ರಮುಖ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಬೇಕು. ಹೀಗಾಗಿ ಅಂದು 11 ಗಂಟೆಗೆ ಬಾಗಲಕೋಟೆ ನಗರದ ಕಾಳಿದಾಸ ಸರ್ಕಲ್‌ನಿಂದ ಜಿಲ್ಲಾಡಳಿತ ಕಚೇರಿಯವರೆಗೆ ಪಾದಯಾತ್ರೆ ನಡೆಯಲಿದೆ. ಬಳಿಕ ಹೋರಾಟ ಆರಂಭವಾಗಲಿದ್ದು, ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳ ಸಾವಿರಾರು ಸಂಖ್ಯೆಯ ರೈತರು, ಸಂತ್ರಸ್ತರು ಪಾಲ್ಗೊಳ್ಳುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಚುನಾವಣೆ ಪೂರ್ವ ನಡೆದ ಜಲಾಂದೋಲನ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯನವರು ಪ್ರತಿ ವರ್ಷ 40 ಸಾವಿರ ಕೋಟಿ ರೂ. ಅನುದಾನ ಒದಗಿಸಿ 3ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸುವ ಭರವಸೆ ನೀಡಿದ್ದರು. ಆಲಮಟ್ಟಿ ಜಲಾಶಯವನ್ನು 519ರಿಂದ 524 ಮೀಟರ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿತ್ತು. ಇದೀಗ 522 ಮೀಟರ್‌ಗೆ ಇಳಿಸಲು ಹೊರಟಿರುವುದು ಸರಿಯಲ್ಲ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನಾ ಭಾದಿತ ಸಂತ್ರಸ್ತರ ಹೋರಾಟ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಕಾಖಂಡಕಿ ಮಾತನಾಡಿ, ಕೃಷ್ಣಾ ಯೋಜನೆಗೆ ಅಡಿಗಲ್ಲು ಹಾಕಿ 60 ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ. ಆದ್ದರಿಂದ ಯೋಜನೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net