ಜಾನಪದ ವಿವಿ ಎದುರು ಅಹೋರಾತ್ರಿ ಧರಣಿ ನಾಳೆಯಿಂದ

guntral
Published on

ಹುಬ್ಬಳ್ಳಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಅಕ್ರಮ ನೇಮಕಾತಿ ರದ್ದುಪಡಿಸಿ, ನ್ಯಾಯಾಂಗ ತನಿಖೆ ಮಾಡುವಂತೆ ಆಗ್ರಹಿಸಿ ಡಿ. 4ರಿಂದ ಶಿಗ್ಗಾವಿಯ ಜಾನಪದ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಪೌರಕಾರ್ಮಿಕರ ಮತ್ತು ಜನರಲ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ವಿಜಯ ಗುಂಟ್ರಾಳ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶಗಳು ಯು.ಜಿ.ಸಿ., ವಿಶ್ವವಿದ್ಯಾಲಯದ ನಿಯಮಾವಳಿ ಹಾಗೂ ಸಿ ಆ್ಯಂಡ್ ಆರ್ ರೂಲ್ಸ್ 2021ರ ನಿಬಂಧನೆಗಳ ಪ್ರಕಾರ ಮರು ನೇಮಕಾತಿಗೆ ಆದೇಶ ಮಾಡುವಂತೆ ಹೋರಾಟದ ಮೂಲಕ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದರು.
ಅಕ್ರಮ ನೇಮಕಾತಿ ರದ್ದುಪಡಿಸಿ ತಪ್ಪಿತಸ್ಥರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಿ ಮರು ನೇಮಕಾತಿಗೆ ಅಧಿಸೂಚನೆ ಹೊರಡಿಸುವ ಮೂಲಕ ನೊಂದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು. ಈ ಬಗ್ಗೆ ಸರ್ಕಾರ ಕೂಡಲೇ ಬೆಳಗಾವಿಯಲ್ಲಿ ಡಿ. 4ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸೂಕ್ತ ಆದೇಶ ಹೊರಡಿಸಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸರ್ವಾಂಗೀಣ ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಬಸವರಾಜ ಗೊಬ್ಬಿ, ರುದ್ರಗೌಡ ಪೊಲೀಸ್‌ಗೌಡ್ರ, ಬಸವರಾಜ ಜೇಕಿನಕಟ್ಟಿ, ಮಂಜುನಾಥ ಹಾವೇರಿ, ಗಾಳೆಪ್ಪ ದ್ವಾಸಲಕೇರಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net