ಜಾತಿ ಗಣತಿ ವರದಿ ವಿರೋಧಕ್ಕೆ ಅಹಿಂದ ಆಕ್ಷೇಪ

18 hnl
Published on

ಹೊನ್ನಾಳಿ: ರಾಜ್ಯದಲ್ಲಿ ಜಾತಿ ಗಣತಿ ಕುರಿತು ಪ್ರಬಲ ಕೋಮಿನವರು ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ಖಂಡನೀಯ, ವರದಿಯ ವಿಸõತ ಚರ್ಚೆ, ಮಾರ್ಪಾಡಿಗೆ ಅವಕಾಶವಿದೆ ಎಂದು ತಾಲೂಕು ಅಹಿಂದ ಅಧ್ಯಕ್ಷ ಡಾ. ಈಶ್ವರ ನಾಯ್ಕ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಅಹಿಂದ ನಾಯಕರ ಸಭೆಯಲ್ಲಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಶೋಷಿತ, ಹಿಂದುಳಿದ ಸಮುದಾಯಗಳ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವ ಪ್ರಬಲರು, ಇದೀಗ ಜಾತಿ ಗಣತಿ ವಿಚಾರದಲ್ಲಿ ಅವರಿಗೆ ವರದಿಯಿಂದ ಸಿಗಬಹುದಾಗ ಸೌಲಭ್ಯಗಳನ್ನು ಬೆಂಬಲಿಸದೇ ಏಕಾಏಕಿ ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.

ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಅಹಿಂದ ನಾಯಕ ಬಿ. ಸಿದ್ದಪ್ಪ ಮಾತನಾಡಿ, ಪ್ರಸ್ತುತ ಎಲ್ಲ ಜನ ಸಮುದಾಯದವರಿಗೂ ಸಮಬಾಳು ಹಾಗೂ ಸಮಪಾಲು ಸಿದ್ಧಾಂತವನ್ನು ಅನುಸರಿಸಿಕೊಂಡು ಹೋಗುತ್ತಿರುವ ಮುಖ್ಯಮಂತ್ರಿ ಅವರಿಗೆ ಜಾತಿ ಗಣತಿ ವರದಿ ಮಂಡಿಸಲು ಅಡ್ಡಿಪಡಿಸಲಾಗುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ ಮಾತನಾಡಿ, ಪ್ರತಿ ಮನೆಗಳಿಗೆ ಹೋಗಿ ಸರ್ವೆ ಮಾಡಿದ್ದು, ಈ ಕಾರ್ಯಕ್ಕೆ ಸರ್ಕಾರ 160 ಕೋಟಿ ರೂ. ಖರ್ಚು ಮಾಡಿದೆ. ಇದೀಗ ಈ ವರದಿ ಬಗ್ಗೆ ಅನಗತ್ಯ ಚರ್ಚೆ, ಅನಗತ್ಯ ಗೊಂದಲ ಉಂಟು ಮಾಡುವುದು ತರವಲ್ಲ ಎಂದರು.

ಮುಖಂಡರಾದ ದಿಡಗೂರು ತಮ್ಮಣ್ಣ, ಮಾರಿಕೊಪ್ಪದ ಮಂಜಪ್ಪ, ತಾಲೂಕು ಕುರುಬ ಸಂಘದ ಅಧ್ಯಕ್ಷ ಎಂ.ಎಸ್. ಫಾಲಾಕ್ಷಪ್ಪ, ಬಾಬು ಹೋಬಳದಾರ್, ಸಣ್ಣಸಿದ್ದಪ್ಪ, ಅಲ್ಪಸಂಖ್ಯಾತ ಸಮುದಾಯದ ಸುಲೇಮಾನ್ ಖಾನ್, ಎಸ್.ಶ್ರೀನಿವಾಸ್, ಸಿಂಪಿ ಸಮಾಜದ ನಟರಾಜ್ ಸೇರಿ ಹಿಂದುಳಿದ ಸಮುದಾಯದ ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net