

ಮಡಿಕೇರಿ:
ಮಡಿಕೇರಿಯ ನೂತನ ಖಾಸಗಿ ಬಸ್ ನಿಲ್ದಾಣದ ಉದ್ಯಾನವನದಲ್ಲಿ (ಇಂದಿರಾ ಕ್ಯಾಂಟೀನ್ ಬಳಿ) ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡುವಂತೆ ಮತ್ತು ಇಂದಿರಾ ಕ್ಯಾಂಟೀನ್ ಬಳಿ ಹೆಚ್ಚು ಸ್ಥಳಾವಕಾಶ ಇರುವುದರಿಂದ ದೇಶದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಪುತ್ಥಳಿ ನಿರ್ಮಾಣ ಮಾಡುವಂತೆ ಅಹಿಂದ ಕೊಡಗು ಜಿಲ್ಲಾ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಈ ಸ್ಥಳದಲ್ಲಿ ಆಕ್ಷೇಪಣೆಗಳು ಏನಾದರೂ ಇದ್ದಲ್ಲಿ ಮಡಿಕೇರಿ ನಗರದ ಹೃದಯ ಭಾಗವಾದ ಹಳೆಯ ಖಾಸಗಿ ಬಸ್ ನಿಲ್ದಾಣದ ತಡೆಗೋಡೆ ಬಳಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನ ಗ್ರಂಥಾಲಯ ನಿರ್ಮಿಸುವಂತೆಯೂ ಮನವಿ ಮಾಡಲಾಯಿತು.
ಜಿಲ್ಲಾಧಿಕಾರಿ ಕರೆದ ನಗರ ಸಭೆ ಸಾಮಾನ್ಯ ಸಭೆಯಲ್ಲಿ ಮಡಿಕೇರಿ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡುವಂತೆ ನಗರ ಸಭಾ ಸದಸ್ಯ ಬಶೀರ್ ಅಹ್ಮದ್ ಪ್ರಸ್ತಾಪಿಸಿದ್ದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಯಿತು.
ಸಮಿತಿಯ ಅಧ್ಯಕ್ಷ ರವಿಗೌಡ, ನಗರಸಭಾ ಸದಸ್ಯರಾದ ಬಶೀರ್ ಅಹಮದ್, ನಾಮ ನಿರ್ದೇಶಿತ ಸದಸ್ಯ ಮುದ್ದು ರಾಜ್, ಸಮಿತಿಯ ಪ್ರಮುಖರಾದ. ವಿನೋದ್ ಕುಮಾರ್, ಹರೀಶ್ ಹೆಚ್.ಜಿ., ಮೊಹಮ್ಮದ್ ಅಲಿ, ಜಾನ್ಸನ್ ಪ್ರವೀಣ್ ಮತ್ತಿತರರು ಇದ್ದರು.