

ಬೆಳಗಾವಿ: ನಿಗೂಢ ಕರ್ಮದ ಜಂಜಡದಿಂದ ದೂರವಾಗಲು ಸತ್ಯ, ಅಹಿಂಸೆಯ ಮಾರ್ಗದಲ್ಲಿ ನಡೆಯಬೇಕು ಎಂದು ದಿಗಂಬರ ಮುನಿಶ್ರೀ ಪ್ರಸಂಗಸಾಗರ ಮಹಾರಾಜರು ಹೇಳಿದರು.
ನಗರದ ಎಸಿಪಿಆರ್ ಗುರುದೇವ ರಾನಡೆ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಪ್ರವಚನ ಮಾಲಿಕೆಯಲ್ಲಿ ಅವರು ಮಾತನಾಡಿದರು. ಗುರುದೇವ ರಾನಡೆ ಅಂತಹ ಮಾರ್ಗದರ್ಶನ ನೀಡಬಲ್ಲ ಗುರುಗಳು. ಜೈನ ಧರ್ಮದಲ್ಲಿ ಹೇಳಿದಂತೆ ಆತ್ಮ ತತ್ವವನ್ನು ಹಿಡಿಯಬೇಕು. ಆ ಸಂಕಲ್ಪ ನಾವೆಲ್ಲ ಮಾಡೋಣ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸರ್ವೋ ಕಂಟ್ರೋಲ್ಸ್ ಸಂಸ್ಥಾಪಕ ದೀಪಕ ಧಡೂತಿ, ರಾನಡೆ ಮಂದಿರ ಆಧ್ಯಾತ್ಮಿಕ ನೆಲೆವೀಡು. ಇಲ್ಲಿಯ ಸತ್ಕಾರ ಸಂತೋಷ ತಂದಿದೆ. ಜೈನ ಧರ್ಮದ ಉಪದೇಶದಂತೆ ನಡೆದರೆ ಮಂಗಳಮಯ ಬದುಕು ಸಾಧ್ಯ ಎಂದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಮಾರುತಿ ಬಿ. ಝಿರಲಿ ಮಾತನಾಡಿ, ದಿಗಂಬರ ಮುನಿಗಳು ತಮ್ಮ ಕಠಿಣ ಶ್ರಮದಿಂದ ಜೈನ ಧರ್ಮದ ಉನ್ನತಿಗೆ ಕಾರಣರಾಗಿದ್ದಾರೆ. ಮಹಾತ್ಮ ಗಾಂೀಜಿ ಅವರು ಅಹಿಂಸೆ ತತ್ವವನ್ನು ಜೈನ ಧರ್ಮದಿಂದ ತೆಗೆದುಕೊಂಡರು. ಶ್ರೀ ಗುರುದೇವ ರಾನಡೆ ಅವರು ಜೈನ ಸಿದ್ಧಾಂತ ಪ್ರಶಂಶಿಸಿದ್ದಾರೆ ಎಂದರು. ಉಮಾ ಸಂಗೀತ ಪ್ರತಿಷ್ಠಾನದ ವಿದ್ಯಾರ್ಥಿನಿಯರಿಂದ ಪ್ರಾರ್ಥಿಸಿದರು. ಪ್ರೊ.ಸೋನಲ್ ಚಿನಿವಾಲ ನಿರೂಪಿಸಿದರು. ಡಾ.ರಾಜೇಂದ್ರ ಮಠದ ವಂದಿಸಿದರು.