ಹುಬ್ಬಳ್ಳಿಯಲ್ಲಿ ಅಹಿಲ್ಯಾಬಾಯಿ ಹೊಳ್ಕರ ನಾಟಕ ಪ್ರದರ್ಶನ

IMG-20251016-WA0034-1.jpg
Published on

ಹುಬ್ಬಳ್ಳಿ: ಇಲ್ಲಿಯ ಸುನಿಧಿ ಕಲಾ ಸೌರಭ ಹಾಗೂ ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ಸಹಯೋಗದಲ್ಲಿ "ಮಹಾರಾಣಿ ಅಹಿಲ್ಯಾಬಾಯಿ ಹೊಳ್ಕರ' ಐತಿಹಾಸಿಕ ನಾಟಕ ಪ್ರದರ್ಶನವನ್ನು ಅ. 17ರಂದು ಸಂಜೆ 6ಕ್ಕೆ ಇಲ್ಲಿಯ ದೇಶಪಾಂಡೆನಗರ ಸವಾಯಿ ಗಂಧರ್ವ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ರಂಗಾಯಣ ಮಾಜಿ ನಿರ್ದೇಶಕ ಸುಭಾಸ್ ನರೇಂದ್ರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಣಿ ಅಹಿಲ್ಯಾಬಾಯಿ ಹೊಳ್ಕರ ಅವರ 300ನೇ ಜನ್ಮದಿನದ ನಿಮಿತ್ತವಾಗಿ ಸುನಿಧಿ ಕಲಾ ಸೌರಭ ವತಿಯಿಂದ ಈ ನಾಟಕವನ್ನು ಉಚಿತವಾಗಿ ಪ್ರದರ್ಶನ ನೀಡಲಾಗುತ್ತಿದೆ. ಅದಮ್ಯಚೇತನ ಅಧ್ಯೆ ಡಾ. ತೇಜಶ್ವಿನಿ ಅನಂತಕುಮಾರ ನಾಟಕ ಉದ್ಘಾಟಿಸುವರು. ರಂಗಕರ್ಮಿ ಡಾ. ಶಶಿಧರ ನರೇಂದ್ರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ಮಹಾರಾಷ್ಟ್ರದ ಮಾಳ್ವಾ ಪ್ರಾಂತ್ಯದ ರಾಣಿಯಾಗಿ 32 ವರ್ಷ ಆಳ್ವಿಕೆ ಮಾಡಿದ ರಾಣಿಯು ಆಡಳಿತ ಚತುರೆ, ಸಮರ ಪ್ರವಿಣೆ ಅಷ್ಟೇ ಅಲ್ಲದೇ ಮಹಾಮಾನವತಾವಾದಿ, ಕರುಣಾಮೂರ್ತಿಯಾಗಿದ್ದರು. ದೈವಿಭಕ್ತರಾಗಿದ್ದರು. ಅವರ ಜೀವನದ ಹಲವು ಮಜಲುಗಳನ್ನು ಪಿಎಚ್.ಡಿ ಗ್ರಂಥ ಹಾಗೂ ಇತರ ಮೂಲಗಳಿಂದ ಆಯ್ದು ನಾಟಕ ರಚನೆ ಮಾಡಿ ನಿರ್ದೇಶನ ಮಾಡಿದ್ದೇನೆ ಎಂದು ಕಲಾ ಸೌರಭದ ಅಧ್ಯಕ್ಷರೂ ಆದ ನರೇಂದ್ರ ಅವರು ತಿಳಿಸಿದರು.

ಅಹಿಲ್ಯಬಾಯಿ ಹೊಳ್ಕರ ಕುರಿತು ಇದು ಮೊದಲ ನಾಟಕ ಪ್ರದರ್ಶನವಾಗಿದೆ. 30ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ. ಅಹಿಲ್ಯಾರಾಣಿ ಪಾತ್ರದಲ್ಲಿ ಖ್ಯಾತ ರಂಗಕಲಾವಿದೆ, ಅನಾಥರ ಮಾಯಿ ನಾಟಕದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ವೀಣಾ ಅಠವಲೆ ಕಾಣಿಸಿಕೊಳ್ಳಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಲಕ್ಷ್ಮಣ ಸುಣಗಾರ, ವಿನಯ ನಾಯಕ್, ವೀಣಾ ಅಠವಲೆ, ಸುಜಾತಾ ಹೆಬ್ಬಾಳ, ಐಶ್ವರ್ಯ ತಾಂಬೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net