ಪಾರದರ್ಶಕ ಚುನಾವಣೆಗೆ ಮುಂದಾಗಿ- ಮಾಜಿ ಶಾಸಕ ಸಿ.ಎಸ್. ನಾಡಗೌಡ

C A Nadagouda
ಮುದ್ದೇಬಿಹಾಳ ಪಟ್ಟಣದಲ್ಲಿ ಮಾಜಿ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ವಾಹನದ ಮುಂದೆ ಅಕ್ರಮವಾಗಿ ಸೀರೆ ಹಂಚುತ್ತಿದ್ದಾರೆ ಎನ್ನಲಾದ ವಿಡಿಯೋ ಪ್ರದರ್ಶಿಸಿದರು. ಬಿ.ಕೆ. ಬಿರಾದಾರ, ಸಿ.ಬಿ. ಅಸ್ಕಿ, ಕಾಶೀಂ ಪಟೇಲ್ ಮೂಕಿಹಾಳ ಇತರರಿದ್ದರು.
Published on

ಮುದ್ದೇಬಿಹಾಳ: ಮತದಾರರಿಗೆ ಹಣ ಹಂಚುವುದಿಲ್ಲ ಎಂದು ನೀವು ದೇವರ ಮೇಲೆ ಪ್ರಮಾಣ ಮಾಡಲು ಸಿದ್ಧರಾದರೆ ನಾನೂ ಸಿದ್ಧ ಎಂದು ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ನಾಡಗೌಡ ಅಪ್ಪಾಜಿಯವರು ಬಿಜೆಪಿ ಅಭ್ಯರ್ಥಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರಿಗೆ ಸವಾಲು ಹಾಕಿದ್ದಾರೆ. ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಎರಡು ಕೋಟಿ ರೂ. ಗೂ ಅಧಿಕ ಖರ್ಚಾಗಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ವಿಡಿಯೋಗಳು ದೊರೆತಿದ್ದರೂ ಚುನಾವಣೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಇನ್ನಾದರೂ ಚುನಾವಣೆ ಅಧಿಕಾರಿಗಳು ಅಕ್ರಮಗಳನ್ನು ನಿಲ್ಲಿಸಿ, ಪಾರದರ್ಶಕ ಚುನಾವಣೆಗೆ ಮುಂದಾಗಬೇಕು. ಇಲ್ಲದಿದ್ದರೆ ತಹಸೀಲ್ದಾರ್ ಕಚೇರಿ ಎದುರು ಸತ್ಯಾಗ್ರಹಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ಗೆ ಸೇರ್ಪಡೆ ಆಗುವವರೆಗೆ ಬೆದರಿಕೆ ಹಾಕುತ್ತಿದ್ದಾರೆ. ಕೊಳಕು ಮಾತುಗಳನ್ನು ಆಡುತ್ತಿದ್ದಾರೆ. ಉತ್ತರ ಪ್ರದೇಶ, ಪಂಜಾಬ್‌ನಲ್ಲಿ ನಡೆದಂತೆ ಚುನಾವಣೆ ಸಂದರ್ಭದಲ್ಲಿಯೇ ಐಟಿ ರೈಡ್ ಆಗುತ್ತಿದೆ. ಆದಾಯ ತೆರಿಗೆ ಇಲಾಖೆ ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದರು.

ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ. ಅಸ್ಕಿ (ಕೊಣ್ಣೂರ) ಮಾತನಾಡಿ, ಬಾಲಾಜಿ ಶುಗರ್ಸ್‌ನವರು 100-200 ಕೋಟಿ ರೂ. ದಂಡ ಬಂದರೂ ಕಟ್ಟಲು ಸಿದ್ಧರಿದ್ದಾರೆ. ಇಂತಹ ದಾಳಿಗೆಲ್ಲ ಬೆದರುವವರು ನಾವಲ್ಲ. ಸಂಬಂಧಿತ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ಮಾಡಲಿ ಎಂದರು.

ಬಿ.ಕೆ. ಬಿರಾದಾರ, ಬಾಪುರಾವ್ ದೇಸಾಯಿ, ಶಾಂತಗೌಡ ಪಾಟೀಲ್ ನಡಹಳ್ಳಿ, ಎಸ್.ಎಸ್. ಹುಲ್ಲೂರ, ಸಿದ್ಧಣ್ಣ ಮೇಟಿ, ಸಂತೋಷ ಚವ್ಹಾಣ, ಎಂ.ಎಚ್. ಹಾಲಣ್ಣವರ ಹಲವಾರು ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net