

ಹಾನಗಲ್ಲ: ನಮ್ಮೊಳಗಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ವೈಮನಸು ದೂರ ಮಾಡಬೇಕಿದೆ. ಎಲ್ಲರೂ ಒಂದು ಎನ್ನುವ ಭಾವದಿಂದ ಸ್ವಾಸ್ಥ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಹೊಂಬಳಿ ಗ್ರಾಮದಲ್ಲಿ ರಾಮಲಿಂಗ ಹಾಗೂ ಬಸವೇಶ್ವರ ದೇವಸ್ಥಾನದ ಮಂಗಲ ಭವನ ಹಾಗೂ ದಾಸೋಹ ಭವನ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸೃಷ್ಟಿಯ ಮುನಿಸಿನಿಂದ ಕಳೆದ ಹಲವು ವರ್ಷಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ರೈತನ ಬದುಕು ಚಿಂತಾಜನಕವಾಗಿದೆ. ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಬೇಧ, ಭಾವ ಮಾಡದೇ ಜೊತೆಗೂಡಿ ಹೆಜ್ಜೆ ಹಾಕುವ ದೃಢಸಂಕಲ್ಪ ಮಾಡಬೇಕಿದೆ. ಸಮುದಾಯ ಭವನಕ್ಕೆ 10 ಲಕ್ಷ ರೂ., ಗ್ರಾಮದ ರಸ್ತೆ ಸುಧಾರಣೆಗೆ 15 ಲಕ್ಷ ರೂ. ಹಾಗೂ ರಾಮಲಿಂಗೇಶ್ವರ ದೇವಸ್ಥಾನ ಜೀಣೋದ್ಧಾರಕ್ಕೆ 5 ಲಕ್ಷ ರೂ. ಅನುದಾನ ದೊರಕಿಸಲಾಗಿದೆ ಎಂದು ವಿವರಿಸಿದರು.
ಸಾನ್ನಿಧ್ಯವಹಿಸಿದ್ದ ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಭೌತಿಕವಾದುದನ್ನು ಹಾಳು ಮಾಡಬಹುದು. ಭಕ್ತಿಯ ಮನಸನ್ನು ನಾಶ ಪಡಿಸುವುದು ಎಂದಿಗೂ ಸಾಧ್ಯವಿಲ್ಲ. ಮನಸೇ ಮಂದಿರ ಎನ್ನುತ್ತೇವೆ. ಧಾರ್ವಿುಕ ಸಂಸ್ಕಾರಗಳು ಮನಸಿನಲ್ಲಿ ಭಕ್ತಿಯನ್ನು ಶಾಶ್ವತಗೊಳಿಸುತ್ತವೆ. ಧರ್ಮ ಸಂಸ್ಕಾರಗಳನ್ನು ಅಳವಡಿಸಿಕೊಂಡು ಎಲ್ಲರೂ ಒಂದಾಗಿ ಬದುಕಲು ದೇವಸ್ಥಾನಗಳು ಸಹಕಾರಿಯಾಗಿವೆ ಎಂದರು.
ಮಾರನಬೀಡ ಗ್ರಾಪಂ ಉಪಾಧ್ಯಕ್ಷೆ ನಗೀನಾ ಹರವಿ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಟಾಕನಗೌಡ ಪಾಟೀಲ, ಮಂಜು ಗೊರಣ್ಣನವರ, ವೀರೇಶ ಬೈಲವಾಳ, ಆದರ್ಶ ಶೆಟ್ಟಿ, ಗನಿ ಪಟೇಲ್, ಭರಮಣ್ಣ ಶಿವೂರ, ಎಂ.ಎ. ನೆಗಳೂರ, ಕುಮಾರಣ್ಣ ಮಿರ್ಜಿ, ಬಸಪ್ಪ ಚನ್ನಕ್ಕನವರ, ಬಸವರಾಜ ಖೇಮಾಜಿ, ಬಸವರಾಜ ಬೆಡಗಿ, ಯಲ್ಲಪ್ಪ ಹಾನಗಲ್ಲ, ಸಿದ್ದಪ್ಪ ಚೆಂಗಳಮ್ಮನವರ, ಮಹಲಿಂಗಪ್ಪ ಹಾದಿ, ಶಂಕರಗೌಡ ಪಾಟೀಲ ಇತರರಿದ್ದರು.