ವ್ಯವಹಾರಿಕ ಜ್ಞಾನಕ್ಕೆ ಆಹಾರ ಮೇಳ ಸಹಕಾರಿ, ಪುರಸಭೆ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್ ಅಭಿಮತ

7-vij-1b-food fest-scince exibition
Published on

ವಿಜಯಪುರ: ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ವ್ಯವಹಾರಿಕ ಜ್ಞಾನವು ಪಡೆಯಲು ಈ ಮೇಳವು ಸಹಕಾರಿ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್ ತಿಳಿಸಿದರು.

ಪಟ್ಟಣದ ಪ್ರಗತಿ ಪ್ರೈಮರಿ ಶಾಲಾ ಆವರಣದಲ್ಲಿ ಪ್ರಗತಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪಣಜ ಟಿ 20-ಇದು ತಿನಿಸುಗಳ ಕಣಜ’ ಆಹಾರ ಮೇಳ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ಆಹಾರ ಮೇಳ ಮಾಡುವುದರಿಂದ ವಿದ್ಯಾರ್ಥಿಗಳಿಗೆ ವ್ಯವಹಾರದ ಜ್ಞಾನ ವೃದ್ಧಿಯಾಗುತ್ತದೆ, ವಿದ್ಯಾರ್ಥಿಗಳಲ್ಲಿರುವ ಕೌಶಲವನ್ನು ವಿದ್ಯಾರ್ಥಿ ಜೀವನದಿಂದಲೇ ಯಾವರೀತಿ ಬಳಸಿಕೊಳ್ಳಬೇಕು. ವೃತ್ತಿ ಜೀವನದಲ್ಲಿ ಯಾವರೀತಿ ಹಣ ಹೂಡಿ ಅದರಲ್ಲಿ ಲಾಭ ನಷ್ಟಗಳ ಅರಿವು ಮೂಡುವುದರೊಂದಿಗೆ, ಮುಂದಿನ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬ ಅರಿವು ಮೂಡುತ್ತದೆ ಎಂದರು.

ಶ್ರೀ ನಗರೇಶ್ವರಸ್ವಾಮಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಎಂ.ಸತೀಶ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕೌಶಲ ಬೆಳೆಸುವ ಉದ್ದೇಶದಿಂದ ಈ ಮೇಳ ಹಮ್ಮಿಕೊಳ್ಳಲಾಗಿದೆ. ಹೀಗೆ ವ್ಯಾಪಾರ ಮಾಡುವುದರಿಂದ ಗಣಿತದ ಲೆಕ್ಕಗಳನ್ನು ಸರಳಗೊಳಿಸುವ ತಂತ್ರವನ್ನು ವಿದ್ಯಾರ್ಥಿಗಳು ಅರಿಯುತ್ತಾರೆ ಎಂದರು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ತಾವು ರೂಪಿಸಿದ ವೈಜ್ಞಾನಿಕ ಅಂಶಗಳನ್ನು ವೀಕ್ಷಕರಿಗೆ ಉತ್ತವವಾಗಿ ಮನವರಿಕೆಯಾಗುವಂತೆ ತಿಳಿಸಿಕೊಟ್ಟರು.

ಮಕ್ಕಳ ತಜ್ಞ ಡಾ.ಶ್ಯಾಮ್‌ಸುಂದರ್ ಮಾತನಾಡಿ, ಆಹಾರ ಪದ್ಧತಿಯಿಂದ ಆಗುವ ಬದಲಾವಣೆ ದೈನಂದಿನ ಜೀವನದಲ್ಲಿ ಬಳಸಬೇಕಾದ ಪೌಷ್ಟಿಕ ಆಹಾರ ಸೇವಿಸುವ ವಿಧಾನ, ಶುಚಿತ್ವ, ಹಿತ-ಮಿತ ಸೇವನೆ ಬಗ್ಗೆ ಮಾಹಿತಿ ನೀಡಿದರು.

ಪ್ರಾಂಶುಪಾಲ ಎನ್.ನಾಗರಾಜು ಮಾತನಾಡಿ, ರಾಕೆಟ್‌ಗಳ ಲಾಂಚಿಂಗ್, ವಿದ್ಯುತ್ ಪರಿವರ್ತಕಗಳ ಬಗ್ಗೆ ಆಟೋಮೆಟಿಕ್ ವಾಹನಗಳು, ಗಾಳಿಯಿಂದ ಹಾಗೂ ವಾಹನಗಳ ಚಲನೆಯಿಂದ ವಿದ್ಯುತ್ ಉತ್ಪತ್ತಿ ಮಾಡುವುದು, ಅತಿಯಾದ ರಾಸಾಯನಿಕಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು, ಕಲುಷಿತ ನೀರಿನ ಪುನರ್ ಬಳಕೆ ಸೇರಿ ವಿದ್ಯಾರ್ಥಿಗಳ ಬುದ್ಧಿ ಚುರುಕುಗೊಳಿಸುವಂತಹ ವಿಜ್ಞಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಕೋಸಂಬರಿ, ಪಾನಕ ತರಕಾರಿ ಸಲಾಡ್, ಟೀ, ಕಾಫಿ ಎಲ್ಲ ರೀತಿಯ ಜೂಸ್, ವಿವಿಧ ಪಾನಿಪೂರಿ ನಾನಾ ಬಗೆಯ ಸಿಹಿ ತಿಂಡಿಗಳನ್ನು ಸ್ವಂತ ತಯಾರು ಮಾಡಿ ಆಹಾರ ಮೇಳದಲ್ಲಿ ಮಾರಾಟ ಮಾಡುತ್ತಿದ್ದ ದೃಶ್ಯ ಪಾಲಕರು ಮತ್ತು ಸಾರ್ವಜನಿಕರ ಗಮನಸೆಳೆೆಯಿತು.

ಕಾಲೇಜು ವ್ಯವಸ್ಥಾಪಕ ನಿರ್ದೇಶಕ ಎಸ್.ಕೃಪಾಶಾಕರ್, ಪ್ರಾಂಶುಪಾಲರಾದ ಬಿ.ಎನ್.ರಮೇಶ್, ಪ್ರದೀಪ್, ವೆಂಕಟೇಶ್, ಮುಖ್ಯಶಿಕ್ಷಕ ಪ್ರಕಾಶ್, ಶಿಕ್ಷಕರು, ಪಾಲಕರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net