ಭಾರತಾಂಬೆಯ ಹೆಮ್ಮೆಯ ಪುತ್ರಿ ಅಹಲ್ಯಾಬಾಯಿ

Ahalyabai is Bharatambe's proud daughter
ಮಹಾಲಿಂಗಪುರದ ಕರಿಸಿದ್ಧೇಶ್ವರ ದೇವಸ್ಥಾನ ಸಭಾಂಗಣದಲ್ಲಿ ನಡೆದ ರಾಜಮಾತೆ ಅಹಲ್ಯಾಬಾಯಿ ಹೊಳ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಮಹಾಲಿಂಗಪ್ಪ ಜಕ್ಕಣ್ಣವರ, ಕಸಾಪ ವಲಯ ಅಧ್ಯಕ್ಷ ಬಸವರಾಜ ಮೇಟಿ ಇದ್ದರು.
Published on

ಮಹಾಲಿಂಗಪುರ: ಭಾರತಾಂಬೆಯ ಹೆಮ್ಮೆಯ ಪುತ್ರಿ ರಾಜಮಾತೆ ಅಹಿಲ್ಯಾಬಾಯಿ ಹೊಳ್ಕರ್. ರಾಷ್ಟ್ರದಲ್ಲಿ ಸಾಮಾಜಿಕ ಅಭಿವೃದ್ಧಿ, ಧಾರ್ಮಿಕ ಅಭಿವೃದ್ಧಿ, ಧರ್ಮ ಪುನರುತ್ಥಾನ ವಿಚಾರವಾಗಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟಿನಮಠ ಹೇಳಿದರು.

ನಗರದ ಕರಿಸಿದ್ಧೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ರಾಜಮಾತೆ ಅಹಲ್ಯಾಬಾಯಿ ಹೊಳ್ಕರ್‌ರ 299ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಹಲ್ಯಾಬಾಯಿ ಹೋಳ್ಕರ್ ತನ್ನ ಪ್ರಜೆಗಳ ಬಗ್ಗೆ ಮಾತ್ರವಲ್ಲ, ಎದುರಾಳಿಗಳ ಬಗ್ಗೆಯೂ ನ್ಯಾಯಪರತೆ ಹೊಂದಿದ್ದರು. ಸೈನಿಕ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕ ಎದುರಾಳಿ ರಾಜ್ಯಗಳ ಪ್ರಮುಖರ ಹಾಗೂ ಸೈನಿಕರ ಕುಟುಂಬಸ್ಥರಿಗೆ ಪತ್ರ ಬರೆದು ಅವರ ಪತ್ನಿ ಮತ್ತು ಮಕ್ಕಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ರಾಜ್ಯದ ಜೈಲಿನಲ್ಲಿದ್ದ ಕೈದಿಗಳಿಗೆ ಹೊಟ್ಟೆತುಂಬ ಊಟ ನಿಡುವಂತೆ ಕಟ್ಟಪ್ಪಣೆ ವಿಧಿಸಿದ್ದರು. ಇಂತಹ ಮಾನವೀಯತೆಯ ಮಹಾಪರ್ವತವೇ ಅವರಾಗಿದ್ದರು ಎಂದರು.

ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸಪನಾ ಅನಿಗೋಳ ಮಾತನಾಡಿ, ಗಂಡ ಸತ್ತರೆ ಅವನ ಆಸ್ತಿ ಹೆಂಡತಿಗೆ ಸಿಗುವುದನ್ನು ನಿರಾಕರಿಸಲ್ಪಟ್ಟ ಕಾಲದಲ್ಲಿ ಇಂತಹ ಪದ್ಧತಿ, ರುವಾಜುಗಳಿಗೆ ಕಡಿವಾಣ ಹಾಕಿ ಗಂಡನ ಆಸ್ತಿಗೆ ಹೆಂಡತಿ ವಾರಸುದಾರಳೆಂಬ ಕಾನೂನನ್ನು ಜಾರಿಗೊಳಿಸಿದರು. ದತ್ತು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನೀಡುವ ಕಾಯ್ದೆ ಜಾರಿಗೊಳಿಸಿದರು. ಪಾನನಿರೋಧ ಹಾಗೂ ಭ್ರಷ್ಟ ಆಡಳಿತಗಳಂಥ ಅನಿಷ್ಟಕಾರಕ ಸಂಗತಿಗಳನ್ನು ತೊಡೆದು ಹಾಕಲು ರಾಜದಂಡ ಬಳಸಿ ಪ್ರಯತ್ನಿಸಿದರು. ಅಹಲ್ಯಾಬಾಯಿ ಆಳ್ವಿಕೆಯಲ್ಲಿ ಇಂಧೋರ್ ಒಂದು ಸಣ್ಣ ಪಟ್ಟಣವಾಗದೆ ಪ್ರಮುಖ ವ್ಯಾಪಾರ ಕೇಂದ್ರವಾಗಿ ಅಭಿವೃದ್ಧಿ ಹೊಂದಿತು. ಅವರ ಜೀವನ ನಿಜಕ್ಕೂ ಆದರ್ಶಪ್ರಾಯವಾಗಿತ್ತು ಎಂದು ಹೇಳಿದರು.

ಗಣ್ಯ ವ್ಯಾಪಾರಿ ಮಹೇಶ ಇಟಕನ್ನವರ, ಕಸಾಪ ವಲಯ ಅಧ್ಯಕ್ಷ ಬಸವರಾಜ ಮೇಟಿ, ಸೈದಾಪುರ ಜಿಪಂ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ಜಯರಾಮ ಶೆಟ್ಟಿ ಮಾತನಾಡಿದರು.

ನಾಗರಾಳದ ಅಮೋಘ ಸಿದ್ಧೇಶ್ವರ ಮಠದ ಪೀಠಾಧಿಪತಿ ಲಕ್ಕಪ್ಪ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಗಣ್ಯರಾದ ಎಸ್.ವೈ. ಹುದ್ದಾರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಶೇಗುಣಶಿ, ಸುಶೀಲಾ ಸೈದಾಪುರ, ಸುಮಾ ಮೇಟಿ, ಮುಖಂಡರಾದ ಮಹಾಲಿಂಗಪ್ಪ ಜಕ್ಕಣ್ಣವರ, ಚಂದ್ರಪ್ಪ ದೋಣಿ, ಗೊಲೇಶ ಅಮ್ಮಣಗಿ, ಶ್ರೀಶೈಲ ಕಾರಜೋಳ, ಕಲ್ಲಪ್ಪ ಚಿಂಚಲಿ, ಪ್ರಭು ಹುಬ್ಬಳ್ಳಿ, ಶ್ರೀಶೈಲ ಅವಟಿ, ಮಹಾಲಿಂಗಪ್ಪ ಹೊಸೂರು, ಪರಸಪ್ಪ ಬಂಡಿ, ರಾಜು ದೋಣಿ, ಹಣಮಂತ ಸಂಶಿ, ಹಣಮಂತ ಅವಟಿ, ಭರಮಪ್ಪ ಅವಟಿ ಇತರರಿದ್ದರು. ಲಕ್ಷ್ಮಣ ಕಿಶೋರ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net