

ವಿಜಯವಾಣಿ ಸುದ್ದಿಜಾಲ ಉಡುಪಿ
ಜನನ-ಮರಣ ಸಹಜ. ಆದರೆ, ಈ ಎರಡು ಹಂತದ ಮಧ್ಯೆ ನಾವು ಹೇಗೆ ಜೀವನ ನಡೆಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಬದುಕಿನಲ್ಲಿ ಹೊಗಳಿಕೆ, ತೆಗಳಿಕೆ ಎಲ್ಲವೂ ಎದುರಾಗುತ್ತವೆ. ಮರಣದ ನೂರಾರು ವರ್ಷದ ನಂತರವೂ ನಮ್ಮ ಸಮಾಜಮುಖಿ ಕಾರ್ಯ, ಸಾಧನೆ, ಶ್ರಮಗಳು ಸದಾ ಪ್ರೇರಣಾದಾಯಕವಾಗಿ ನಾಡು ಸ್ಮರಿಸಿಕೊಳ್ಳುವಂತಿರಬೇಕು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಉಡುಪಿಯ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಮೇ 24ರಂದು ಆಯೋಜಿಸಿದ್ದ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಹಿಳಾ ಸಂಕುಲಕ್ಕೆ ಅಹಲ್ಯಾಬಾಯಿ ಮಾದರಿಯಾಗಿದ್ದಾರೆ. ಅವರ ಸಮಾಜ ಸೇವೆ, ಆದರ್ಶ ಎಂದೆಂದಿಗೂ ಮಾಸದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮಂಗಳೂರು-ಉಡುಪಿ ಪ್ರಭಾರಿ ಹಾಗೂ ವಿಪ ಸದಸ್ಯೆ ಭಾರತಿ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು.
ಸುಜಲಾ ಸುವರ್ಣ ವಂದೇ ಮಾತರಂ ಹಾಗೂ ದೇಶಭಕ್ತಿ ಗೀತೆ ಹಾಡಿದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜ್ಯೋತಿ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಅನಿತಾ ಮರವಂತೆ ವಂದಿಸಿದರು.
ಅಹಲ್ಯಾಬಾಯಿ ಹೋಳ್ಕರ್ ಜೀವನ ವೃತ್ತಾಂತ ಕುರಿತು ರಾಷ್ಟ್ರ ಸೇವಿಕಾ ಸಮಿತಿಯ ಬೌದ್ಧಿಕ ಪ್ರಮುಖ್ ಕುಮುದಿನಿ ಶೆಣೈ ವಿಶೇಷ ಉಪನ್ಯಾಸ ನೀಡಿದರು. ನಮಗೆ ಜೀವನದಲ್ಲಿ ಸಣ್ಣ ಸಮಸ್ಯೆ ಎದುರಾದರೆ ಸಹಸಿಕೊಳ್ಳಲಾಗದು. ಒಂದು ದಿನ ಗ್ಯಾಸ್ ಇಲ್ಲ, ನೀರಿಲ್ಲ ಎಂದರೆ ತಾಳ್ಮೆಯೇ ಇಲ್ಲ. ಆದರೆ, ಮದುವೆಯಾಗಿ ರಾಜಮನೆತನ ಸೇರಿದರೂ ಅಹಲ್ಯಾಬಾಯಿ ಸುಖವನ್ನೇ ನೋಡಲಿಲ್ಲ, ಅನುಭವಿಸಿಲ್ಲ. ಎಲ್ಲ ದುರ್ವ್ಯಸನಗಳ ದಾಸನಾಗಿದ್ದ ಗಂಡನಿಂದ ಜೀವನ ಹೀನಾಯವಾಗಿತ್ತು. ಯುದ್ಧದ ಸಮಯದಲ್ಲಿ ಮನೆಯ 23 ಜನರನ್ನು ಕಳೆದುಕೊಳ್ಳುತ್ತಾಳೆ. ಆದರೂ ಅಧೈರ್ಯಗೊಳ್ಳದೆ ರಾಜ್ಯ ನಡೆಸುತ್ತಾಳೆ. ಮಹಿಳಾ ಸಬಲೀಕರಣಕ್ಕೆ ಮುಂದಾಗುತ್ತಾಳೆ. ದೇಶದ ಅನೇಕ ದೇಗುಲಗಳ ಜೀರ್ಣೋದ್ಧಾರ ಮಾಡುತ್ತಾಳೆ. ಅಹಲ್ಯಾಬಾಯಿಯ ಆದರ್ಶ, ತಾಳ್ಮೆ ಎಂದಿಗೂ ಮಹಿಳೆಯರಿಗೆ ಪ್ರೇರಣೆ ಎಂದರು.