ರೈತರು ಬಿತ್ತನೆ ಬೆಳೆಗೆ ಕಡ್ಡಾಯವಾಗಿ ವಿಮಾ ಕಂತು ಪಾವತಿಸಿ

WhatsApp Image 2024-06-29 at 4.54.37 PM (1)
Published on

ಗದಗ: ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ತಪ್ಪದೇ ವಿಮಾ ಕಂತು ಪಾವತಿಸುವ ಮೂಲಕ ಪ್ರಕೃತಿ ವಿಕೋಪದಿಂದಾಗುವ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಹೇಳಿದರು.  

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ರೈತರು ಬೆಳೆಯುವಂತಹ ವಿವಿಧ ಬೆಳೆಗಳಿಗೆ ಪ್ರತ್ಯೇಕವಾಗಿ ವಿಮಾ ಕಂತುಗಳನ್ನು ನಿಗದಿಪಡಿಸಲಾಗಿದೆ. ಅದರಂತೆ ವಿಮಾ ಕಂತು ಪಾವತಿಸಲು ಬೆಳೆಗಳಿಗೆ ಅನುಸಾರ ಪ್ರತ್ಯೇಕವಾಗಿ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು  ರೈತರು ಕೊನೆಯ ದಿನಾಂಕದವರೆಗೂ ಕಾಯದೇ ಮುಂಚಿತವಾಗಿ ತಾವು ಬೆಳೆದ ಬೆಳೆಗೆ ವಿಮಾ ಕಂತು ಪಾವತಿಸುವಂತೆ ಸೂಚಿಸಿದೆ.

ಮುಂಗಾರು ಹಂಗಾಮಿನ ಬೆಳೆಗಳಿಗೆ ರೈತರು ಆ್ಯಪ್ ಮೂಲಕ ಸಮೀಕ್ಷೆ ಕೈಗೊಳ್ಳಲು ಅವಕಾಶ ನೀಡಲಾಗಿದ್ದು ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ಗೂಗಲ್ ಪ್ಲೇಸ್ಟೋರ್‍ನಿಂದ ಮುಂಗಾರು ರೈತರ ಬೆಳೆ ಸಮೀಕ್ಷೆಯನ್ನು ಡೌನ್‍ಲೋಡ್ ಮಾಡಿಕೊಂಡು ಬೆಳೆ ವಿವರಗಳನ್ನು ದಾಖಲಿಸಬೇಕು. ಹೀಗೆ ವಿವರಗಳನ್ನು ದಾಖಲಿಸುವದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಮತ್ತು ಬೆಳೆಸಾಲ ಪಡೆಯುವಲ್ಲಿ ರೈತರಿಗೆ ಅನುಕೂಲವಾಗುವದರಿಂದ ಎಲ್ಲ ರೈತರು ಬೆಳೆ ವಿವರಗಳನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ದಾಖಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಬೆಳೆ ವಿವರಗಳನ್ನು ಅಪ್‍ಲೋಡ್ ಮಾಡದಿದ್ದಲ್ಲಿ ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗುವ ಸಾಧ್ಯತೆ ಇರುವುದರಿಂದ ರೈತರು ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ವಿವರಗಳನ್ನು ದಾಖಲಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಪ್ರತಿಯೊಂದು ಬೀಜ ಹಾಗೂ ರಸಗೊಬ್ಬರಗಳ ಅಂಗಡಿಗಳಲ್ಲಿ ಲಭ್ಯವಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ದರ ಹಾಗೂ ಪ್ರಮಾಣಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ರೈತರುಗಳು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಖರೀದಿಸಿದ ನಂತರ  ತಪ್ಪದೇ ಸಂಬಂಧಿತ ಅಂಗಡಿಗಳಿಂದ ರಸೀದಿಯನ್ನು ಪಡೆದುಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.  

ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್. ಮಾತನಾಡಿ, ಜಿಲ್ಲೆಯಲ್ಲಿ  ಜೂನ್ 28 ಕ್ಕೆ ಕೊನೆಗೊಂಡಂತೆ 301548 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಇದ್ದು ಆ ಪೈಕಿ 278239 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.   ರೈತರಿಗೆ ಈಗಾಗಲೇ 4915,46 ಕ್ವಿಂಟಲ್ ಬಿತ್ತನೆ ಬೀಜ ವಿತರಣೆಯಾಗಿದ್ದು ಇನ್ನೂ 1524 ಕ್ವಿಂಟಲ್  ಬಿತ್ತನೆ ಬೀಜ ಲಭ್ಯವಿದೆ.

ರಸಗೊಬ್ಬರಕ್ಕೆ ಸಂಬಂಧಿಸಿದಂತೆ  32375 ಮೆ.ಟನ್ ಮಾರಾಟವಾಗಿದ್ದು  ಇನ್ನೂ  18021  ಮೆ ಟನ್ ರಸಗೊಬ್ಬರ ಲಭ್ಯವಿದೆದ್ದು ಯಾವುದೇ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ವಿತರಣೆಯಲ್ಲಿ  ಯಾವುದೇ ಅಭಾವವಿರುವುದಿಲ್ಲ  ಎಂದು ತಿಳಿಸಿದ ಅವರು  ಈ ಮುಂದಿನಂತೆ ರಸಗೊಬ್ಬರದ ದಾಸ್ತಾನು ಮಾಹಿತಿ ನೀಡಿದರು.
ಡಿಎಪಿ- 9327 ಮೆ.ಟನ್ ಮಾರಾಟವಾಗಿದ್ದು 2202 ಮೆಟ್ರಿಕ್ ಟನ್ ದಾಸ್ತಾನಿದೆ. ಅದರಂತೆ ಎಂಓಪಿ-480 ಮೆ.ಟನ್ ಮಾರಾಟವಾಗಿದ್ದು  538  ದಾಸ್ತಾನು ಇದೆ.  ಕಾಂಪ್ಲೆಕ್ಸ್ – 10046 ಮೆ.ಟನ್ ಮಾರಾಟವಾಗಿದ್ದು  7425 ದಾಸ್ತಾನು ಇದೆ.  ಯೂರಿಯಾ-12341 ಮಾರಾಟವಾಗಿ 7698 ದಾಸ್ತಾನಿದೆ.  ಎಸ್‍ಎಸ್‍ಪಿ-181 ಮಾರಾಟವಾಗಿ 158 ದಾಸ್ತಾನಿದೆ ಎಂದರು.  

2024-25 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಓರಿಯೆಂಟಲ್ ಇನ್ಸೂರನ್ಸ್ ಕಂಪನಿ ಲಿಮಿಟೆಡ್ ಇವರನ್ನು ಸರ್ಕಾರ ಆಯ್ಕೆ ಮಾಡಿದ್ದು    ರೈತರು ಬೆಳೆ ವಿಮೆಗೆ ಸಂಬಂಧಿಸಿದ ಮಾಹಿತಿಗಾಗಿ ಓರಿಯೆಂಟಲ್ ಇನ್ಸೂರನ್ಸ್ ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.

ನೀರಾವರಿ ಆಧಾರಿತ ಭತ್ತ, ಮುಸುಕಿನ ಜೋಳ, ಜೋಳ, ಶೇಂಗಾ, ಹತ್ತಿ ಬೆಳೆಗಳು ಹಾಗೂ  ಮಳೆ ಆಶ್ರಿತ ಮುಸುಕಿನ ಜೋಳ, ಜೋಳ, ಸಜ್ಜಿ, ನವಣಿ,ತೊಗರಿ, ಎಳ್ಳು, ಶೇಂಗಾ , ಹತ್ತಿ ಬೆಳೆಗಳ ವಿಮಾ  ನೋಂದಣಿಗೆ ಕೊನೆಯ ದಿನ ಜುಲೈ 31 ಆಗಿರುತ್ತದೆ. ಮಳೆ ಆಶ್ರಿತ ಹೆಸರು ಬೆಳೆಗೆ ವಿಮಾ ನೋಂದಣಿಗೆ ಕೊನೆಯ ದಿನ ಜುಲೈ 15 ಆಗಿರುತ್ತದೆ. ನೀರಾವರಿ ಹಾಗೂ ಮಳೆ ಆಶ್ರಿತ ಸೂರ್ಯಕಾಂತಿ ಬೆಳೆಗೆ ವಿಮಾ ಪಾವತಿಯ ಕೊನೆಯ ದಿನ ಅಗಸ್ಟ 16 ಆಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಭೆಯಲ್ಲಿ ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಮಾತನಾಡಿ, ರಾಜ್ಯ ಸರ್ಕಾರವು 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ( ವಿಮಾ ) ಯೋಜನೆಯನ್ನು ಅನುಷ್ಟಾನಗೊಳಿಸಿದೆ.  

ನೀರಾವರಿ ಆಧಾರಿತ ಈರುಳ್ಳಿ ಹಾಗೂ ಕೆಂಪು ಮೆಣಸಿನಕಾಯಿ ಬೆಳೆಗಳಿಗೆ ರೈತರು ವಿಮೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆಗಿದ್ದು  ಮಳೆ ಆಶ್ರಿತ ಈರುಳ್ಳಿ ಹಾಗೂ ಕೆಂಪು ಮೆಣಸಿನಕಾಯಿ ಬೆಳೆಗಳಿಗೆ  ವಿಮೆಗೆ ಅರ್ಜಿ ಸಲ್ಲಿಸಲು ಅಗಸ್ಟ 16 ಕೊನೆಯ ದಿನವಾಗಿದೆ. ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ಗದಗ ಜಿಲ್ಲೆಗೆ ಓರಿಯಂಟಲ್ ಜನರಲ್ ಇನ್ಸೂರನ್ಸ್ ಕಂಪನಿಯವರು ಅನುಷ್ಟಾನ ವಿಮಾ ಸಂಸ್ಥೆಯಾಗಿರುತ್ತದೆ. ರೈತರು ನೋಂದಣಿಗಾಗಿ ಕಡ್ಡಾಯವಾಗಿ ಫ್ರೂಟ್ಸ್ ಐಡಿ ಹೊಂದಿರಬೇಕು  ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ  ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳಲ್ಲಿ  ಮಳೆ ಮಾಪನ ಯಂತ್ರ ಅಳವಡಿಕೆ, ಜಿಲ್ಲೆಯಲ್ಲಿ ಕುಸುಬೆ ಬೆಳೆಯ ಬೆಂಬಲ ಬೆಲೆಯ ಕೇಂದ್ರ ನಿರ್ಮಾಣ, ರೈತರ ಆತ್ಮಹತ್ಯೆ ಪ್ರಕರಣಗಳು, ಆಕಸ್ಮಿಕ ಮರಣಗಳ ಪ್ರಕರಣಗಳು, ಬೆಂಕಿ ಬಣವೆ ಪ್ರಕರಣಗಳು ಸೇರಿದಂತೆ ಕೃಷಿ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ತಾಲೂಕಾ ಅಧಿಕಾರಿಗಳು, ವಿವಿಧ ರೈತ ಸಮುದಾಯದ ಮುಖಂಡರು, ರೈತರು, ಇನ್ಸುರನ್ಸ್ ಕಂಪನಿಯ ಪ್ರತಿನಿಧಿಗಳು,  ರಸಗೊಬ್ಬರದ ಅಂಗಡಿ ಮಾಲೀಕರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.    

ರೈತರು ಕೃಷಿ ಇಲಾಖೆಯ ಬೆಳೆ ವಿಮೆಗೆ ಸಂಬಂಧಿಸಿದ ಮಾಹಿತಿಗಾಗಿ ಸಂಪರ್ಕಿಸಬೇಕಾದ ಓರಿಯೆಂಟಲ್ ಇನ್ಸೂರನ್ಸ್ ಕಂಪನಿಯ ಪ್ರತಿನಿಧಿಗಳ ವಿವರ ಈ ಕೆಳಗಿನಂತಿದೆ.  

ಜಿಲ್ಲಾ ಪ್ರತಿನಿಧಿ-ಮುತ್ತಣ್ಣ ಕಂಡಕಿ ಮೊ: 8310428945, 9845928186; ಗದಗ ತಾಲ್ಲೂಕು ಪ್ರತಿನಿದಿ ನಾಗರಾಜ ಕುರ್ತಕೋಟಿ ಮೊ: 7892387655 ; ಗಜೇಂದ್ರಗಡ ತಾಲ್ಲೂಕು ಪ್ರತಿನಿಧಿ-ಫಕೀರಸಾಬ ಆರ್. ಗುರಿಕಾರ -ಮೊ: 9164098169; ಲಕ್ಷ್ಮೇಶ್ವರ ತಾಲ್ಲೂಕು ಪ್ರತಿನಿಧಿ-ಮಹಾಂತೇಶ ಎಸ್. ಪ್ರಭಯ್ಯನವರವ್ಮಠ ಮೊ: 8618234981 ; ಮುಂಡರಗಿ ತಾಲ್ಲೂಕು ಪ್ರತಿನಿಧಿ-ವಿಠ್ಠಲ ಮರಡಿ ಮೊ: 9060604403; ನರಗುಂದ ತಾಲ್ಲೂಕು ಪ್ರತಿನಿಧಿ-ಕರಿಯಪ್ಪ ಹಿರೇಕುರುಬರ ಮೊ: 9742603652 ; ರೋಣ ತಾಲ್ಲೂಕು ಪ್ರತಿನಿಧಿ-ಮಂಜುನಾಥ ಚಟ್ಟಿ ಮೊ: 9611317070; ಶಿರಹಟ್ಟಿ ತಾಲ್ಲೂಕು ಪ್ರತಿನಿಧಿ-ನಿಂಗಪ್ಪ ಎಲ್. ಲಮಾಣಿ ಮೊ: 9880611390 ;

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net