

ಬಳ್ಳಾರಿ: ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಅಗ್ರೊ ಪ್ರೊಸೆಸಿಂಗ್ ಕ್ಲಸ್ಟರ್ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಹೇಳಿದರು.
ನಗರದ ರಾಯಲ್‌ಪೋರ್ಟ್ ಹೋಟೆಲ್‌ನಲ್ಲಿ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಭಾರತೀಯ ಸಂಬಾರು ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಬಾರು ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆ ಮೆಣಸಿನಕಾಯಿ ಬೆಳೆಗೆ ಹೆಸರುವಾಸಿಯಾಗಿದೆ. ನಮ್ಮ ಭಾಗದ ರೈತರಿಗೆ ಸ್ಥಳೀಯವಾಗಿ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹಾಗೂ ಜಿಲ್ಲೆಯ ಬಹುದಿನದ ಬೇಡಿಕೆಯಾಗಿದ್ದ ಅಗ್ರೊ ಪ್ರೊಸೆಸಿಂಗ್ ಕ್ಲಸ್ಟರ್ ನಿರ್ಮಾಣಕ್ಕೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)ಯಿಂದ 20 ಕೋಟಿ ರೂ. ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದರಿಂದಾಗಿ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಅನುಕೂಲವಾಗಲಿದೆ. ಉತ್ಪಾದನೆ ಮತ್ತು ಸಂರಕ್ಷಣೆಗೆ ಸಹಕಾರಿ ಆಗಲಿದೆ. ರೈತರು ಮಾರುಕಟ್ಟೆಗೆ ಬೇರೆ ಜಿಲ್ಲೆಗೆ ಹೋಗುವ ಅಗತ್ಯ ಇರುವುದಿಲ್ಲ ಎಂದು ತಿಳಿಸಿದರು.
ಕೇರಳದ ಕೊಚ್ಚಿನ್‌ನಲ್ಲಿರುವ ಭಾರತೀಯ ಸಂಬಾರು ಮಂಡಳಿಯ (ಅಭಿವೃದ್ಧಿ) ನಿರ್ದೇಶಕ ಧರ್ಮೇಂದರ್ ದಾಸ್ ಮಾತನಾಡಿ, ಕರ್ನಾಟಕ ಮಸಾಲೆ ಪದಾರ್ಥಗಳ ಉತ್ಪಾದನೆ, ಮೌಲ್ಯವರ್ಧನೆ ಮತ್ತು ರಫ್ತುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶದಲ್ಲಿ ಕರ್ನಾಟಕ ಮೆಣಸಿನಕಾಯಿ ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿದೆ. ಭಾರತ ಮಸಾಲೆ ಪದಾರ್ಥಗಳ ಉತ್ಪಾದನೆಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ ಎಂದು ಹೇಳಿದರು.
ಭಾರತವು ನಾನಾ ಮಸಾಲೆಗಳ ತವರೂರು ಎಂದೇ ಹೆಸರುವಾಸಿಯಾಗಿದೆ. 2022-23 ರ ಅವಧಿಯಲ್ಲಿ ಭಾರತವು 14 ಲಕ್ಷ ಮೆಟ್ರಿಕ್ ಟನ್ ಮಸಾಲೆ ಹಾಗೂ ಮಸಾಲೆ ಉತ್ಪನ್ನಗಳನ್ನು ರಫ್ತು ಮಾಡಿದೆ. 2030 ರ ವೇಳೆಗೆ 10 ಶತಕೋಟಿ ಡಾಲರ್‌ಗಳ ವಹಿವಾಟು ಸಾಧಿಸುವ ಗುರಿಯನ್ನು ಹೊಂದಿದೆ. ಅದೇ ರೀತಿಯಾಗಿ ದೇಶದಿಂದ ಮಸಾಲೆಗಳ ರಫ್ತು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಮಾವೇಶಗಳ ಮೂಲಕ ಪರಿಚಯಿಸುತ್ತಿದೆ. ಖರೀದಿದಾರರು ಮತ್ತು ಮಾರಾಟಗಾರರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಭಾರತೀಯ ಸಂಬಾರು ಮಂಡಳಿಯು ರೈತರ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಮತ್ತು ಅವರ ಕೃಷಿ ಉತ್ಪನ್ನಗಳ ಗರಿಷ್ಠ ಬೆಲೆಯನ್ನು ಪಡೆಯಲು ಖರೀದಿದಾರರೊಂದಿಗೆ ನೇರವಾಗಿ ವ್ಯಾಪಾರ ಸಂಪರ್ಕವನ್ನು ರಚಿಸುವ ಮೂಲಕ ರಫ್ತುಗಳನ್ನು ಬೆಂಬಲಿಸಲು ಸಾಮಾನ್ಯ ವೇದಿಕೆಯನ್ನೂ ಕಲ್ಪಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎನ್.ಎಂ.ಯಶವಂತ್‌ರಾಜ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಇದೇ ವೇಳೆ ತೋಟಗಾರಿಕೆ ಇಲಾಖೆ ವತಿಯಿಂದ ಹೊರತಂದ ಮೆಣಸಿನಕಾಯಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಎಂಬ ಕಿರು ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ನಂತರದಲ್ಲಿ ಸಂಬಾರು ಪದಾರ್ಥಗಳ ಖರೀದಿದಾರ ಮತ್ತು ಮಾರಾಟಗಾರರೊಂದಿಗೆ ಚರ್ಚೆಗಳು ಜರುಗಿದವು.
ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಸಸ್ಯರೋಗಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ರಾಘವೇಂದ್ರ ಆಚಾರಿ, ಸಹಾಯಕ ಪ್ರಾಧ್ಯಾಪಕ ಸಿ.ಜಿ.ಯಾದವ್, ಭಾರತೀಯ ಸಂಬಾರು ಮಂಡಳಿಯ (ಮಾರುಕಟ್ಟೆ) ಉಪ ನಿರ್ದೇಶಕ ಎಂ.ಮಣಿಕಂದನ, ಮಂಡಳಿಯ ಉಪ ನಿರ್ದೇಶಕ ಎಂ.ವೈ.ಹೊನ್ನುರ, ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಗಿರೀಶ್, ಪ್ರಧಾನ ವ್ಯವಸ್ಥಾಪಕ ಸಿದ್ದರಾಮಯ್ಯ ಎಂ.ಬರಗಿಮಠ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ್ ಸಪ್ಪಂಡಿ, ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ಎನ್.ಕೆಂಗೇಗೌಡ, ಜಿಲ್ಲಾ ಕೈಗಾರಿಕಾ ಮತ್ತು ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್ ಸೇರಿದಂತೆ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಸದಸ್ಯರು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಖರೀದಿದಾರರು ಮತ್ತು ಮಾರಾಟಗಾರರು ಪಾಲ್ಗೊಂಡಿದ್ದರು.