

ಹರೀಶ್ ಮೋಟುಕಾನ ಮಂಗಳೂರು
ನಗರ ಪ್ರದೇಶದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಯುವಕರು ಲಾಕ್‌ಡೌನ್ ಸಮಯವನ್ನು ಊರಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಮೀನು ಹೊಂದಿರುವ ಕೆಲವರು ಭವಿಷ್ಯದಲ್ಲಿ ಕೃಷಿಯಲ್ಲೇ ಮುಂದುವರಿಯುವ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ.
ಬೆಂಗಳೂರು, ಮಂಗಳೂರು, ಮೈಸೂರು ಮೊದಲಾದ ನಗರಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದವರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಊರಿಗೆ ಮರಳಿದ್ದಾರೆ. ಹಲವು ವರ್ಷಗಳ ಕಾಲ ತೋಟದಿಂದ ದೂರ ಉಳಿದಿದ್ದವರು ಈಗ ತೋಟಕ್ಕೆ ಇಳಿಯುತ್ತಿದ್ದಾರೆ. ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ.
ಪ್ರಸ್ತುತ ಹಲವು ಕಡೆಗಳಲ್ಲಿ ಕೃಷಿಕರ ತೋಟಗಳಲ್ಲಿರುವ ಕೆರೆ, ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಅದರಲ್ಲಿ ತುಂಬಿರುವ ಕೆಸರು, ಕಸ ಕಡ್ಡಿಗಳನ್ನು ತೆಗೆದು ಶುಚಿಗೊಳಿಸುವ ಕೆಲಸ ನಡೆಯುತ್ತಿದೆ. ನಗರದಲ್ಲಿ ಒತ್ತಡದಿಂದ ಕೆಲಸ ಮಾಡುತ್ತಿದ್ದ ಯುವಕರು ಮನೆಯವರೊಂದಿಗೆ ಹಾಗೂ ಸ್ಥಳೀಯ ಕೆಲಸಗಾರರೊಂದಿಗೆ ಕೈಜೋಡಿಸಿದ್ದಾರೆ.
ಗಿಡ ನಾಟಿಗೆ ಸಿದ್ಧತೆ: ಇನ್ನು ಒಂದೂವರೆ ತಿಂಗಳಿನಲ್ಲಿ ಮಳೆಗಾಲ ಆರಂಭವಾಗಲಿದೆ. ಜುಲೈ, ಆಗಸ್ಟ್ ತಿಂಗಳಿನಲ್ಲಿ ಅಡಕೆ, ತೆಂಗು, ಗೇರು, ಕೊಕ್ಕೊ, ಕಾಳುಮೆಣಸು, ಬಾಳೆ ಮೊದಲಾದ ಗಿಡಗಳನ್ನು ನಾಟಿ ಮಾಡುತ್ತಾರೆ. ಇದಕ್ಕೆ ಹೊಂಡ ತೆಗೆಯುವ ಕೆಲಸ ಈಗ ನಡೆಯುತ್ತಿದೆ. ಗೇರು, ಕಾಳುಮೆಣಸು, ಅಡಕೆ ಗಿಡಗಳನ್ನು ಮಾಡಲು ಪ್ಲಾಸ್ಟಿಕ್‌ಗಳಿಗೆ ಸುಡು ಮಣ್ಣು ತುಂಬಿಸುವ ಪ್ರಕ್ರಿಯೆ ಸಾಗಿದೆ. ನಗರದಲ್ಲಿ ಕೆಲಸ ಮಾಡುತ್ತಿದ್ದ ಯುವಕರೆಲ್ಲ ಒಟ್ಟಾಗಿ ಒಂದೊಂದು ದಿನ ಒಬ್ಬೊಬ್ಬರ ಮನೆಯಲ್ಲಿ ಕೆಲಸ ಮಾಡುವ ಮೂಲಕ ಶ್ರಮ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಭವಿಷ್ಯದಲ್ಲಿ ಕೃಷಿಗೆ ಆದ್ಯತೆ ಲಾಕ್‌ಡೌನ್ ತೆರವುಗೊಂಡ ಬಳಿಕ ಮತ್ತೆ ನಗರದ ಕಡೆಗೆ ಹೋಗುವ ಯುವಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಗೋಚರಿಸಿದೆ. ಊರಿನಲ್ಲಿ ಕೃಷಿ ಭೂಮಿ ಹೊಂದಿರುವ ಯುವ ಜನತೆ ಅದನ್ನೇ ಅಭಿವೃದ್ಧಿಪಡಿಸಿ ಅದರಲ್ಲೇ ಮುಂದುವರಿಯುವ ಕಡೆಗೆ ಚಿಂತನೆ ನಡೆಸಿದ್ದಾರೆ. ಖಾಸಗಿ ಸಂಸ್ಥೆಗಳು ಉದ್ಯೋಗ ಕಡಿತ, ವೇತನ ಕಡಿತ ಮಾಡುವ ಸಾಧ್ಯತೆ ಇದೆ. ನಗರದಲ್ಲಿ ದುಬಾರಿ ಜೀವನ ನಡೆಸುವುದಕ್ಕಿಂತ ಊರಿನಲ್ಲೇ ನೆಮ್ಮದಿಯಾಗಿ, ಆರೋಗ್ಯಯುತವಾಗಿ ಬದುಕುವ ಯೋಚನೆ ಹಲವರದ್ದಾಗಿದೆ. ಒಂದು ರೀತಿಯಲ್ಲಿ ಇದು ಒಳ್ಳೆಯ ನಿರ್ಧಾರವಾಗಿದೆ.
ಮಂಗಳೂರು ನಗರದಲ್ಲಿ 15 ವರ್ಷಗಳಿಂದ ಸೇಲ್ಸ್‌ಮೆನ್ ಆಗಿ ಕೆಲಸ ಮಾಡುತ್ತಿದ್ದೇನೆ. ಲಾಕ್‌ಡೌನ್ ಆಗಿ 20 ದಿನಗಳಿಂದ ಸುಳ್ಯದ ಮನೆಯಲ್ಲಿದ್ದೇನೆ. ನನ್ನಂತೆ ಬೆಂಗಳೂರು, ಮೈಸೂರು ನಗರದಲ್ಲಿದ್ದ ನೆರೆಹೊರೆಯ ಮನೆಗಳ ಯುವಕರು ಕೂಡ ಊರಿಗೆ ಬಂದಿದ್ದಾರೆ. ಈಗ ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಮುಂದಿನ ಕೃಷಿ ಬದುಕಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಕೆಲವು ಯುವಕರು ಸಂಪೂರ್ಣ ಕೃಷಿಯಲ್ಲೇ ತೊಡಗಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಜಯರಾಮ ಪಿ.ಜಿ, ಸೇಲ್ಸ್‌ಮೆನ್ ಮಂಗಳೂರು .