ಪಲ್ಲಾಗಟ್ಟೆ ವಿದ್ಯುತ್ ಕೇಂದ್ರಕ್ಕೆ ರೈತರ ಮುತ್ತಿಗೆ

29 jlr
Published on

ಜಗಳೂರು: ಕೃಷಿ ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಜತೆಗೆ ಹಗಲಿನಲ್ಲಿ ಏಳು ತಾಸು ವಿದ್ಯುತ್ ನೀಡುವಂತೆ ಒತ್ತಾಯಿಸಿ ಸೋಮವಾರ ತಾಲೂಕಿನ ಪಲ್ಲಾಗಟ್ಟೆ ವಿದ್ಯುತ್ ಕೇಂದ್ರಕ್ಕೆ ವಿವಿಧ ಗ್ರಾಮಗಳ ನೂರಾರು ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಿಳಿಚೋಡು ಹೋಬಳಿ ವ್ಯಾಪ್ತಿಯ ಪಲ್ಲಾಗಟ್ಟೆ ವಿದ್ಯುತ್ ಕೇಂದ್ರ ವ್ಯಾಪ್ತಿಯ ಪಲ್ಲಾಗಟ್ಟೆ, ಮರಿಕುಂಟೆ, ಉರ್ಲುಕಟ್ಟೆ ಸೇರಿ ಸುತ್ತಮುತ್ತಲಿನ ನೂರಾರು ರೈತರು ದಿಢೀರ್ ಕಚೇರಿಗೆ ಧಾವಿಸಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿದರು.

ಉತ್ತಮ ಮುಂಗಾರು ಹಾಗೂ ಹಿಂಗಾರು ಮಳೆಯಿಂದ ಕೆರೆ, ಕಟ್ಟೆ, ಡ್ಯಾಂಗಳಲ್ಲಿ ನೀರು ತುಂಬಿದೆ. ನೀರಿನ ಅಭಾವ ಇಲ್ಲ. ಆದರೂ ಕೃಷಿ ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ಅಧಿಕಾರಿಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ ಎಂದು ರೈತರು ಗುಡುಗಿದರು.

ರೈತ ಮುಖಂಡ ಮರಿಕುಂಟೆ ಶಿವಕುಮಾರ್ ಮಾತನಾಡಿ, ಸರ್ಕಾರ ಹತ್ತಾರು ಯೋಜನೆ ಜಾರಿಗೆ ತಂದು ಜನರ ಪ್ರಗತಿಗೆ ಒತ್ತು ನೀಡುತ್ತಿದ್ದರೂ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ನೀರಾವರಿ ಬೆಳೆಗಳಿಗೆ ಕನಿಷ್ಠ ದಿನಕ್ಕೆ 10 ತಾಸು ವಿದ್ಯುತ್ ನೀಡಬೇಕು. ಆದರೆ ಸರ್ಕಾರದಿಂದ ಕೇವಲ 7 ತಾಸು ನೀಡಲು ಆದೇಶವಿದೆ. ಅದನ್ನೂ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ ಎಂದು ಖಂಡಿಸಿದರು.

ರಾತ್ರಿ ಮತ್ತು ಹಗಲಿನಲ್ಲಿ ತಲಾ ಮೂರು ತಾಸು ಕರೆಂಟ್ ನೀಡುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಒಂದು ದಿನ ಪೂರೈಸಿದರೆ ಮತ್ತೊಂದು ದಿನ ಕೊಡುವುದಿಲ್ಲ. ಹೀಗಾದರೆ ನೀರು ಹಾಯಿಸಲಾಗದೆ ಬೆಳೆಗಳು ಬಾಡುತ್ತವೆ. ಹಗಲಿನಲ್ಲಿಯೇ ಏಳು ತಾಸು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಉರ್ಲುಕಟ್ಟೆ ಲಿಂಗನಗೌಡ ಮಾತನಾಡಿ, ಸಮರ್ಪಕ ವಿದ್ಯುತ್ ನೀಡಿದರೆ ರೈತರು ಇಲಾಖೆಯತ್ತ ಮುಖ ಮಾಡುವುದಿಲ್ಲ. ಆದಷ್ಟು ಬೇಗ ಸಮಸ್ಯೆ ಸರಿಪಡಿಸಬೇಕು. ರೈತರಿಗೆ ಬೇಕಾದ ವಿದ್ಯುತ್ ಮತ್ತು ಟಿಸಿಗಳನ್ನು ನಿಗದಿತ ಸಮಯಕ್ಕೆ ನೀಡಬೇಕು. ಶಾಸಕರು ಇತ್ತ ಗಮನಹರಿಸಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದರು.

ಬೆಸ್ಕಾಂ ಎಇಇ ಸುಧಾಮಣಿ ಮಾತನಾಡಿ, ಪಲ್ಲಾಗಟ್ಟೆಯಿಂದ ಸೊಕ್ಕೆಯವರೆಗೂ ವಿದ್ಯುತ್ ಕಾಮಗಾರಿ ನಡೆಯುತ್ತಿರುವುದರಿಂದ ತೊಂದರೆಯಾಗಿರಬಹುದು. ಉರ್ಲುಕಟ್ಟೆಗೆ ಕೊನೆಗೊಳಿಸಿ, ಸೊಕ್ಕೆ ಭಾಗದವರಿಗೆ ಸೊಕ್ಕೆ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಕೊಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ತೊಂದರೆಯಾಗದಂತೆ ಮುಂಜಾಗ್ರತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರೈತರಾದ ಎಸ್.ವಿ.ತಿಪ್ಪೇಸ್ವಾಮಿ, ಬಸವರಾಜ್, ಪ್ರವೀಣ್, ಸಿದ್ದೇಶ್, ದಿದ್ದಿಗಿ ರಾಜು,ಉರ್ಲುಕಟ್ಟೆ ರವಿಕುಮಾರ್, ಬಸವರಾಜ್, ಸಿದ್ದೇಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net