

ಮಾನ್ವಿ: ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರಲು ಸರ್ಕಾರ ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡಿದಾಗ ಮಾತ್ರ ಲಾಭ ಪಡೆಯಲು ಸಾಧ್ಯ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಕೃಷಿ ಆಸಕ್ತಿ ಮೂಡಿಸಲು ಪ್ರಾಯೋಗಿಕ ಪಾಠ
ತಾಲೂಕಿನ ಚೀಕಲಪರ್ವಿ ರುದ್ರಮುನಿ ಮಹಾ ಶಿವಯೋಗಿಗಳ ಮಠದಲ್ಲಿ ಭಾನುವಾರ ಆಯೋಜಿಸಿದ್ದ ರುದ್ರಮುನಿ ಶಿವಯೋಗಿಗಳ 97ನೇ ಪುಣ್ಯಸ್ಮರಣೋತ್ಸವ ಹಾಗೂ ರಥೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರೈತ ಗೋಷ್ಠಿಯಲ್ಲಿ ಮಾತನಾಡಿದರು.
ಕೃಷಿ ಉತ್ಪಾದನೆ ವೆಚ್ಚ ತಿಳಿಯುವುದಕ್ಕೆ ಕೃಷಿ ಬೆಲೆ ಅಯೋಗ ಇದೆ. ಅದರೆ, ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ವಸ್ತುವಿನ ಉತ್ಪಾದನೆ ವೆಚ್ಚ ತಿಳಿಯುವ ಹಕ್ಕು ಗ್ರಾಹಕರಿಗೆ ದೊರೆಯಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ಪಾದಕತೆ ಹೆಚ್ಚಿರುವ ಕೃಷಿ ಕ್ಷೇತ್ರಕ್ಕೆ ಅದ್ಯತೆ ನೀಡಬೇಕಿದೆ.
ಸ್ವಾತಂತ್ರ್ಯ ಸಂದರ್ಭ ದೇಶದಲ್ಲಿ ಕೃಷಿ ಉತ್ಪಾದನೆ ಕೇವಲ 50 ದಶಲಕ್ಷ ಇತ್ತು. ಆದರೆ, ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಆಹಾರದ ಉತ್ಪ್ಪಾದನೆಯಲ್ಲಿ ಹೆಚ್ಚಿನ ಸಾಧನೆ ತೋರುವುದು ಅವಶ್ಯವಾಗಿದೆ. ಇಂದು ರೈತರು ಅನೇಕ ಸುಧಾರಿತ ಕೃಷಿ ಪದ್ಧತಿ ಕೈಗೊಳ್ಳುವ ಮೂಲಕ ಹೆಚ್ಚಿನ ಇಳುವರಿ ಪಡೆದರೂ ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವುದಕ್ಕೆ ಉತ್ತಮ ಮಾರುಕಟ್ಟೆ ಬೇಕು ಎಂದರು.
ರಾಯಚೂರು ಕೃಷಿ ವಿಜ್ಞಾನಗಳ ವಿವಿ ಕೃಷಿ ವಿಜ್ಞಾನಿ ಡಾ.ಎಂ.ಬಸವಣೆಪ್ಪ ಮಾತನಾಡಿ, ರೈತರು ಆರೋಗ್ಯವನ್ನು ಕಾಪಾಡಿಕೊಳ್ಳಲು ರಾಸಾಯನಿಕ ಮುಕ್ತವಾದ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಅಗತ್ಯಕ್ಕೆ ಅನುಗುಣವಾಗಿ ಆಹಾರ ಧಾನ್ಯ, ತರಕಾರಿ, ಹಣ್ಣುಗಳನ್ನು ಬೆಳೆಯಬೇಕು. ಸ್ವಲ್ಪ ಜಮೀನು ಇದ್ದರೂ ಕೃಷಿಯಲ್ಲಿ ಹೆಚ್ಚಿನ ಅದಾಯ ಪಡೆಯುವುದಕ್ಕೆ ಒಂದೇ ಕ್ಷೇತ್ರದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಬೇಕು. ಸಮಗ್ರ, ಸಾವಯವ ಕೃಷಿಯೊಂದಿಗೆ ಹೈನುಗಾರಿಕೆ, ಮೇಕೆ, ಕುರಿ, ಕೋಳಿ ಸಾಕಣೆ ಮಾಡಬೇಕು ಎಂದು ತಿಳಿಸಿದರು.
ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತ ಸ್ವಾಮೀಜಿ, ಕಲ್ಮಠ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು, ಚೀಕಲಪರ್ವಿ ಶ್ರೀಮಠದ ಪೀಠಾಧ್ಯಕ್ಷ ಸದಾಶಿವ ಸ್ವಾಮೀಜಿ, ಮುನವಳ್ಳಿ ಸೋಮೇಶ್ವರ ಮಠದ ಮುರುಘೇಂದ್ರ ಸ್ವಾಮೀಜಿ, ಮೈಸೂರಿನ ನಿರಂಜನ ದೇವರು, ಹಳೇಕೋಟೆ ಮರಿ ಶಿವಯೋಗಿಗಳ ವಿರಕ್ತ ಮಠದ ಸಿದ್ಧಬಸವ ಸ್ವಾಮೀಜಿ, ಅರಳಹಳ್ಳಿ ಶರಣಬಸವ ದೇವರು, ಡಾ. ಚಂದ್ರಶೇಖರ ಸುವರ್ಣಗಿರಿ ಮಠ, ಶಂಕ್ರಯ್ಯಸ್ವಾಮಿ ಸುವರ್ಣಗಿರಿ ಮಠ ಇತರರಿದ್ದರು.