

ಹೊನ್ನಾಳಿ: ರಸಗೊಬ್ಬರ ಗುಣ ನಿಯಂತ್ರಣದ ಹಿನ್ನೆಲೆಯಲ್ಲಿ ಶುಕ್ರವಾರ ಕೃಷಿ ಇಲಾಖೆ ಅಧಿಕಾರಿಗಳು ವಿವಿಧ ರಸ ಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ರಸಗೊಬ್ಬರದ ಮಾದರಿಯನ್ನು ಸಂಗ್ರಹಿಸಿದರು.
ಈ ವೇಳೆ ಕೃಷಿ ಅಧಿಕಾರಿ ಅತೀಕ್ ಉಲ್ಲಾ ಮಾತನಾಡಿ, ಹೊನ್ನಾಳಿ- ನ್ಯಾಮತಿ ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ರಸಗೊಬ್ಬರಗಳ ಪೋಷಕಾಂಷಗಳ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆಯ ನಿರೀಕ್ಷೆಯಿದ್ದು ರೈತರು ಗುಣಮಟ್ಟದ ಗೊಬ್ಬರಗಳನ್ನು ಅಧಿಕೃತ ಲೈಸೆನ್ಸ್ ಪಡೆದ ಮಾರಾಟಗಾರರಿಂದಲೇ ಖರೀದಿಸಬೇಕು ಎಂದು ಮನವಿ ಮಾಡಿದರು.
ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳಾದ 10:26:26, 20:20:00:13, 15:15:15:09, 19:19:19, 17:17:17, 14:28:14 ಮತ್ತು 16:20:00:13 ಬಳಸಿದರೆ ಮಣ್ಣಿನಲ್ಲಿ ಸಮತೋಲಿತ ರಂಜಕ ಪೋಷಕಾಂಶವನ್ನು ಕಾಯ್ದುಕೊಳ್ಳುವುದರ ಜತೆ ಮೆಕ್ಕೆಜೋಳ ಮತ್ತು ಇತರೆ ಬೆಳೆಗಳ ಸಸ್ಯಗಳು ಲಭ್ಯವಿರುವ ರಂಜಕವನ್ನು ಮಣ್ಣಿನಿಂದ ಬೇರಿಗೆ ಸುಸಲಿತವಾಗಿ ಹೀರಿಕೊಂಡು ಸಸ್ಯ ಬೆಳೆವಣಿಗೆಗೆ ಸಹಾಯಕವಾಗಿ ಅಧಿಕ ಇಳುವರಿ ಪಡೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಲ್ಲದೇ ಸಾರಜನಕ, ರಂಜಕ, ಪೊಟ್ಯಾಷ್ ಮಿಶ್ರಿತ ಗೊಬ್ಬರಗಳನ್ನು ಬಳಸುವುದರಿಂದ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅವಶ್ಯಕವಾಗಿರುವ ಪೊಟ್ಯಾಷ್ ಲಭ್ಯವಾಗಿ ಕೃಷಿ ಬೆಳೆಗಳಲ್ಲಿ ಕೀಟಬಾಧೆ, ರೋಗಬಾಧೆ ಹತೋಟಿಯಾಗಲಿದೆ. ಆದ್ದರಿಂದ ಎಲ್ಲ ರೈತರು ಸಂಯುಕ್ತ ರಸಗೊಬ್ಬರಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಐದು ವರ್ಷದಿಂದ ನಾನು ಡಿಎಪಿಗೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳನ್ನು ತೆಳಗೊಬ್ಬರವಾಗಿ ಬಳಕೆ ಮಾಡಿ ಮೆಕ್ಕೆಜೋಳ ಬೆಳಗೆ ಎಷ್ಟು ರಂಜಕ ಬೇಕು ಅಷ್ಟನ್ನು ಮಾತ್ರ ಸಮತೋಲಿತವಾಗಿ ನೀಡುತ್ತ ಬಂದಿದ್ದೇನೆ. ನೀರಿನಲ್ಲಿ ಕರಗುವ 19:19:19 ಮತ್ತು ಕೃಷಿ ಇಲಾಖೆಯಲ್ಲಿ ಸಿಗುವ ಎಂಎನ್ ಲಿಕ್ವಿಡ್ ಒಂದು ತಿಂಗಳ ಬೆಳೆಗೆ ಸಿಂಪಡಿಸಿದಾಗ ಆರೋಗ್ಯಕರವಾಗಿ ಬೆಳೆದ್ದರಿಂದ ಹೆಚ್ಚಿನ ಇಳುವರಿ ಪಡೆದಿದ್ದೇನೆ. ಈ ವರ್ಷವು ಇದೆ ಪದ್ಧತಿಯನ್ನು ಅನುಸರಿಸುತ್ತೇನೆ ಎಂದು ತಾಲೂಕಿನ ಹತ್ತುರಿನ ರೈತ ಸೋಮಶೇಖರ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.