

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಬರದ ಭೀತಿಗೆ ಒಳಗಾಗಿರುವ ರಾಜ್ಯದಲ್ಲಿಯ ಬೆಳೆ ಪರಿಸ್ಥಿತಿಯನ್ನು ವೀಕ್ಷಿಸಲು ಹಾಗೂ ರೈತರ ಸಮಸ್ಯೆಗಳನ್ನು ಖುದ್ದು ತಿಳಿಯಲು ತಿಂಗಳಿಗೊಮ್ಮೆ ಹೊಲಗಳಿಗೆ ಕೃಷಿ ಸಚಿವರ ಭೇಟಿ ಹಾಗೂ ಸಂವಾದ ಕಾರ‌್ಯಕ್ರಮಕ್ಕೆ ಆ.29 ರಂದು ಮಧ್ಯಕರ್ನಾಟಕ - ಚಿತ್ರದುರ್ಗ ಜಿಲ್ಲೆಯಿಂದ ಚಾಲನೆ ಸಿಗಲಿದೆ.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಂಗಳವಾರ ಜಿಲ್ಲೆಯ ಡಿಎಸ್ ಹಳ್ಳಿಯ ಸಾವಯವ ಹಾಗೂ ಸಮಗ್ರ ಕೃಷಿ ತೋಟ ವೀಕ್ಷಣೆ ಹಾಗೂ ಲಕ್ಷ್ಮೀಸಾಗರದಲ್ಲಿ ಮೆಕ್ಕೆಜೋಳ ಹಾನಿ, ಚಳ್ಳಕೆರೆ ತಾಲೂಕು ಕಾಲುವೇಹಳ್ಳಿ ಹೊಲಗಳಲ್ಲಿ ಲೇಜರ್ ತಂತ್ರಜ್ಞಾನದ ಡ್ರಿಪ್ ಅಳವಡಿಕೆ ಮಾಡಿದ ಮೆಕ್ಕೆಜೋಳದ ಬೆಳೆ ವೀಕ್ಷಣೆ, ಚೌಳೂರು ತಾಲೂಕು ಜುಂಜರಕಟ್ಟೆಯಲ್ಲಿ ಶೇಂಗಾ ಬೆಳೆ ಹಾನಿ, ಚೌಳೂರು ಸಮೀಪದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದ ನಂತರ ಆಗಿರುವ ಬೆಳೆ ಪರಿವರ್ತನೆ ತಾಕುಗಳನ್ನು ವೀಕ್ಷಿಸುವರು.
ಈ ಮೂಲಕ ‘ಹೊಲಗಳ ಕೃಷಿ ಸಚಿವರ ಭೇಟಿ’ ಹಾಗೂ ಜಿಪಂ ಸಭಾಂಗಣದಲ್ಲಿ ಕೃಷಿ ತಂತ್ರಜ್ಞರು, ಪ್ರಗತಿಪರ ರೈತರು, ಕೃಷಿ ಸಾಧಕರು ಮತ್ತಿತರ ಜತೆ ಸಂವಾದಕ್ಕೆ ಚಿತ್ರದುರ್ಗದಿಂದ ಚಾಲನೆ ಸಿಗಲಿದೆ. ಕೃಷಿ ಸಚಿವರು ರಾಜ್ಯದ ಪ್ರತಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೊಲಗಳಿಗೆ ಭೇಟಿ ಮತ್ತು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ಆತಂಕದಲ್ಲಿ ಕೋಟೆನಾಡಿನ ಅನ್ನದಾತ: ಬರದ ಜಿಲ್ಲೆ ಚಿತ್ರದುರ್ಗದಲ್ಲಿ ಸಕಾಲಕ್ಕೆ ಮಳೆಬಾರದೆ ವಿಳಂಬ ಬಿತ್ತನೆ ಹಾಗೂ ಕಳೆದ ಒಂದು ತಿಂಗಳಿಂದ ಮಳೆ ಕೈಕೊಟ್ಟಿರುವುದರಿಂ ದಾಗಿ ಬೆಳೆನಾಶದೊಂದಿಗೆ, ಬೇಸಾಯ, ಬಿತ್ತನೆ ಬೀಜ, ಕೂಲಿ, ಗೊಬ್ಬರಕ್ಕೆಂದು ಮಾಡಿದ್ದ ಸಾಲ ಹೊರೆ ಎಲ್ಲಿ ಮೈ ಮೇಲೆ ಬರುತ್ತದೆಯೊ ಎಂಬ ಆತಂಕದಲ್ಲಿ ಅನ್ನದಾತರಿದ್ದಾರೆ.
ಜಿಲ್ಲೆಯ 2.98 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 2.75 ಲಕ್ಷ ಹೆಕ್ಟೇರ್ ಬಿತ್ತನೆ ಆಗಿದೆ. ಶೇಂಗಾ, ತೊಗರಿ, ಮುಸುಕಿನಜೋಳ, ರಾಗಿ, ಹತ್ತಿ ಇತ್ಯಾದಿ ಬೆಳವಣಿಗೆ ಹಂತದಲ್ಲಿರುವ 1.95 ಲಕ್ಷ ಹೆಕ್ಟೇರ್‌ನಲ್ಲಿ ಶೇ.50 ಕ್ಕೂ ಅಧಿಕ ಪ್ರಮಾಣದ ಬೆಳೆ ನಾಶವಾಗಲಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಕಟಾವಿಗೆ ಬಂದಿರುವ ಸಿರಿಧಾನ್ಯಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ.
ಗ್ರೌಂಡ್ ಟ್ರೂಥಿಂಗ್ ಸರ್ವೇ: ಬರದ ಹಿನ್ನೆಲೆಯಲ್ಲಿ ರಾಜ್ಯದ ಆಯ್ದ 113 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಸರ್ವೆ ಕಳೆದ ಮೂರು ದಿನಗಳಿಂದ ಆರಂಭವಾಗಿ ದೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಈ ಸಮೀಕ್ಷೆಯನ್ನು ಕೈಗೊಂಡಿದ್ದು, ಒಂದೆರಡು ದಿನಗಳಲ್ಲಿ ಇದರ ಸ ಮೀಕ್ಷಾ ವರದಿ ರಾಜ್ಯಸರ್ಕಾರದ ಕೈ ಸೇರಲಿದೆ. ಆಯ್ದ ತಾಲೂಕು, ಆಯ್ದ ಗ್ರಾಮಗಳಲ್ಲಿ ಪ್ರಮುಖ ಬೆಳೆಗಳ ರ‌್ಯಾಂಡಮ್ ಡಿಜಿಟಲ್ ಸರ್ವೆ ನಡೆಯುತ್ತಿದ್ದು, ಇದರ ವರದಿ ಆಧರಿಸಿ ರಾಜ್ಯವನ್ನು ಬರಪೀಡಿತವೆಂದು ಘೋಷಿಸಲು ರಾಜ್ಯ ಸರ್ಕಾರ ತೀರ್ಮಾನಿಸುವ ಸಾಧ್ಯತೆ ಇದೆ.