ಕೃಷಿ ಯಂತ್ರೋಪಕರಣಗಳಿಂದ ರೈತರಿಗೆ ಅನುಕೂಲ

25 Arakera Photo 01
Published on

ಅರಕೇರಾ: ರೈತರು ಕಡಿಮೆ ಬಂಡವಾಳ ಹಾಕಿ ಹೆಚ್ಚು ಆದಾಯ ಗಳಿಸುವುದಕ್ಕೆ ಪ್ರಾಶಸ್ತ್ಯ ನೀಡಬೇಕು. ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ಕಾರ್ಮಿಕರಿಗೆ ಭರಿಸುವ ಹೆಚ್ಚುವರಿ ವೆಚ್ಚವನ್ನು ಉಳಿಸಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಸಿದ್ಧಾರೆಡ್ಡಿ ಹೇಳಿದರು.

ಬಿ.ಗಣೇಕಲ್ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಕೃಷಿ ವಿಸ್ತರಣಾ ಕಾರ್ಯಕ್ರಮದಡಿ ಭತ್ತ ನಾಟಿ ಮಾಡುವ ಯಂತ್ರಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಕೃಷಿ ಕಾರ್ಮಿಕರ ಬೇಡಿಕೆ ಹೆಚ್ಚಿದ್ದು, ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಇದರಿಂದಾಗಿ ಕೇವಲ ಮೂರ‌್ನಾಲ್ಕು ಸಿಬ್ಬಂದಿಯಿಂದ ಯಂತ್ರ ನಿರ್ವಹಿಸಬಹುದು ಹಾಗೂ ಹೆಚ್ಚು ಸಸಿ ನಾಟಿಯಾಗಿ ಉತ್ತಮ ಇಳುವರಿ ಕಂಡುಕೊಳ್ಳಬಹುದು ಎಂದರು.

ಯಂತ್ರ ಸೆಟ್ಟಿಂಗ್ ಸಹಾಯದೊಂದಿಗೆ ಭತ್ತ ನಾಟಿಯಲ್ಲಿ ಅಂತರ ಕಾಯ್ದುಕೊಳ್ಳುತ್ತದೆ. ತಾಲೂಕಿನಲ್ಲಿ ನಾಲ್ಕು ಕೃಷಿ ಯಂತ್ರಧಾರೆ ಕೇಂದ್ರಗಳಿದ್ದು, ಮೂರು ನಿರುಪಯುಕ್ತವಾಗಿವೆ. ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಿಸುತ್ತಿರುವ ಅರಕೇರಾದಲ್ಲಿನ ಕೇಂದ್ರ ರೈತರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ರೈತರಿಂದ ಬೇಡಿಕೆ ಹೆಚ್ಚಾದಂತೆ ಯಂತ್ರಗಳ ಪೂರೈಕೆಗೆ ಕ್ರಮವಹಿಸಲಾಗುವುದು ಎಂದು ಬಸವರಾಜ ಸಿದ್ಧಾರೆಡ್ಡಿ ತಿಳಿಸಿದರು.

ತಾಲೂಕು ಯೋಜನಾಧಿಕಾರಿ ರಾಜೇಶ ಎಂ. ಮಾತನಾಡಿ, ಭತ್ತವನ್ನು ಯಂತ್ರದಿಂದ ನಾಟಿ ಮಾಡುವುದರಿಂದ ಸಮಯದ ಉಳಿತಾಯದೊಂದಿಗೆ ಕಾರ್ಮಿಕರ ಬಳಕೆ ನಿಯಂತ್ರಿಸಬಹುದು. ಭತ್ತದ ಬೀಜಗಳ ಉಳಿತಾಯವೂ ಆಗಲಿದೆ. ಯಂತ್ರೋಪಕರಣಗಳನ್ನು ರಿಯಾಯತಿ ದರದಲ್ಲಿ ಬಾಡಿಗೆ ನೀಡಲಾಗುತ್ತಿದ್ದು, ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ರವೀಂದ್ರ ಗೊರ್ಲಿ, ಯೋಜನೆಯ ಕೃಷಿ ಅಧಿಕಾರಿ ಹುಚ್ಚಪ್ಪ, ಒಕ್ಕೂಟದ ಅಧ್ಯಕ್ಷ ಮಲ್ಲಯ್ಯ ಪೂಜಾರಿ, ರೈತರಾದ ಅರುಣಕುಮಾರ, ಕೃಷ್ಣಪ್ಪ ರೆಡ್ಡಿ, ಪಿ. ಸತ್ಯನಾರಾಯಣ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net