

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ವಿಜಯಪುರ ಹೋಬಳಿಯ ದಂಡಿಗಾನಹಳ್ಳಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಿಶ್ರಬೇಸಾಯದಲ್ಲಿ ತೊಡಗಿಸಿಕೊಂಡಿದ್ದು, ಒಂದೆಡೆ ರೈತರಿಗೆ ವೈಜ್ಞಾನಿಕ ಕೃಷಿ ಪಾಠ ಮಾಡಿದರೆ ಮತ್ತೊಂದೆಡೆ ರೈತರಿಂದ ಸಾಂಪ್ರದಾಯಿಕ ಕೃಷಿಯ ಪಾಠ ಕಲಿಯುತ್ತಿದ್ದಾರೆ.
ಕಾಲೇಜಿನಲ್ಲಿ ಓದುವ ಪಠ್ಯ ಹಾಗೂ ಪ್ರಾಯೋಗಿಕವಾಗಿ ಕಲಿತ ಕೃಷಿ ವಿದ್ಯೆಯನ್ನು ಇಲ್ಲಿನ ಕೋರಮಂಗಲ ಗ್ರಾಮ ಪಂಚಾಯಿತಿನ ದಂಡಿಗಾನಹಳ್ಳಿಯಲ್ಲಿ ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿರುವ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಇದಕ್ಕಾಗಿ 10 ಎಕರೆ ಭೂಮಿಯನ್ನು ಪ್ರಯೋಗಕ್ಕೆ ಬಳಸಿಕೊಂಡಿದ್ದಾರೆ.
ಗ್ರಾಮೀಣ ಕೃಷಿ ಅಭಿವೃದ್ಧಿ ಕಾರ್ಯಕ್ರಮದಡಿ 3 ತಿಂಗಳ ಅವಧಿಯ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಶಿಬಿರದಲ್ಲಿ ಪಾಲ್ಗೊಂಡಿರುವ ಸುಮಾರು 24 ವಿದ್ಯಾರ್ಥಿಗಳು ಮಿಶ್ರ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಾವು ಅಧ್ಯಯನ ಮಾಡಿದ ವಿದ್ಯೆಯನ್ನು ಪ್ರಯೋಗ ಮಾಡುತ್ತಿದ್ದಾರೆ. ಇದರ ಬಗ್ಗೆ ರೈತರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ ರೈತರು ಅನುಸರಿಸುವ ಸಾಂಪ್ರದಾಯಿಕ ಕೃಷಿ ಪದ್ದತಿಯನ್ನೂ ಮಿಶ್ರಗೊಳಿಸಿ ಅವರಿಂದ ಈ ಪದ್ಧತಿಯ ಬಗ್ಗೆ ಮಾಹಿತಿ ಪಡೆದು ಅಧ್ಯಯನ ನಡೆಸುತ್ತಿರುವುದು ವಿಶೇಷವಾಗಿದೆ. ಸ್ಥಳೀಯ ರೈತರೊಂದಿಗೆ ಸಮಾಲೋಚನೆ ನಡೆಸಿ ಅವರ ಮನವೊಲಿಸಿ ಅವರ ಸಹಕಾರದಿಂದ ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಮಿಶ್ರ ಬೇಸಾಯ ಆರಂಭಿಸಿದ್ದು, ಉತ್ತಮ ಲಿತಾಂಶ ಪಡೆಯುವ ದಿಕ್ಕಿನತ್ತ ಬೆವರು ಹರಿಸುತ್ತಿದ್ದಾರೆ.
10 ಎಕರೆಯಲ್ಲಿ ಏನೇನು ಬೆಳೆ?
ರಾಗಿ ಪ್ರಧಾನವಾಗಿದ್ದು ಇದಕ್ಕೆ ಸರಿಸಮನಾಗಿ ಶೇಂಗಾ ಬೆಳೆಯಲಾಗುತ್ತಿದೆ. ಇದರ ಜತೆಜತೆಗೆ ಕಡಲೆ, ಹುರುಳಿ, ಅಲಸಂದೆ, ಉದ್ದು, ನವಣೆ, ಮುಸುಕಿನ ಜೋಳ, ವಿವಿಧ ಬಗೆಯ ಸೊಪ್ಪು, ಅವರೇಕಾಳು, ಎಲೆಕೋಸು, ಹೂಕೋಸು ಸೇರಿ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯಲಾಗುತ್ತಿದೆ.
ರೈತರಿಗೆ ತರಬೇತಿ: ಗ್ರಾಮಾಂತರ ಜಿಲ್ಲೆಯಲ್ಲಿ ಸಾಮಾನ್ಯವಾಗಿ ರೈತರು ಮಳೆ ಅವಲಂಬಿತವಾಗಿದ್ದು, ನೀರಾವರಿ ಹೊಂದಿರುವ ರೈತರ ಪ್ರಮಾಣ ತೀರ ಕಡಿಮೆ ಇದೆ. ಮಳೆಯಾಶ್ರಿತ ರಾಗಿ ಹೊರತುಪಡಿಸಿ ಇನ್ನಿತರ ಬೆಳೆ ಬೆಳೆಯುವುದು ಕಡಿಮೆ. ನೀರಾವರಿ ಇರುವ ರೈತರಷ್ಟೇ ಕೆಲವೊಂದು ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಳೆಯಾಶ್ರಿತ ಭೂಮಿಯಲ್ಲೂ ರಾಗಿ ಹೊರತಾಗಿ ಇನ್ನಿತರ ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ವಿದ್ಯಾರ್ಥಿಗಳು ರೈತರಿಗೆ ತರಬೇತಿ ನೀಡುತ್ತಿದ್ದಾರೆ. ರಸಗೊಬ್ಬರ, ಕೀಟನಾಶಕ, ಕಳೆನಾಶಕದ ಬಳಕೆಯಿಂದಾಗಬಹುದಾದ ದುಷ್ಪರಿಣಾಮಗಳು, ಇವುಗಳ ಹೊರತಾಗಿ ಬೆಳೆ ರಕ್ಷಣೆ ಹೇಗೆ ಎಂಬಿತ್ಯಾದಿ ವಿಷಯಗಳ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡುವ ಮೂಲಕ ಮಕ್ಕಳು ರೈತರಿಂದ ಮೆಚ್ಚುಗೆ ಗಳಿಸಿದ್ದಾರೆ.