

ಹೊಸಕೋಟೆ: ಬೆಂಗಳೂರಿನ ಭಾಗವಾಗುತ್ತಿರುವ ಹೊಸಕೋಟೆ ತಾಲೂಕಿನಲ್ಲಿ ನಗರೀಕರಣದಿಂದ ಶೇಕಡಾ 50 ಕೃಷಿ ಭೂಮಿ ಕಡಿಮೆಯಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಕಳವಳ ವ್ಯಕ್ತಪಡಿಸಿದರು.
ನಗರದ ಪಶು ಸಂಗೋಪನೆ ಇಲಾಖೆ ಆವರಣದಲ್ಲಿ ಪಶು ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ತಾಲೂಕಿನ ರೈತರಿಗೆ ಸೂಕ್ತ ಅನುದಾನ ಬಿಡುಗಡೆ ಮಾಡುವ ನಿಟ್ಟಿನಿಂದ ರೈತರ ಸಬ್ಸಿಡಿ ಹಣವನ್ನು ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡಲಾಗುತ್ತಿದ್ದು, ಅಧಿಕಾರಿಗಳು ಪಾರದರ್ಶಕತೆಯಿಂದ ಕೆಲಸ ಮಾಡುತಿದ್ದಾರೆ. ರೈತರಿಗೆ ಬೇಕಾದ ಸವಲತ್ತುಗಳನ್ನು ಸರ್ಕಾರ ಸಕಾಲಕ್ಕೆ ಅನುಷ್ಠಾನಗೊಳಿಸುತ್ತಾ ಬಂದಿದ್ದು, ರೈತರಿಗೆ ಯಾವುದೇ ಅನನುಕೂಲಗಳಾಗದಂತೆ ಎಚ್ಚರವಹಿಸಿದೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ಕೃಷಿ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಸಿ.ಎನ್.ನಾರಾಯಣಸ್ವಾಮಿ ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬು ರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ನಗರಸಭೆ ನಾಮನಿ ಸದಸ್ಯೆ ಪಾರ್ವತಮ್ಮ, ಉದ್ಯಮಿ ಬಿ.ವಿ.ಬೈರೇಗೌಡ, ಮುಖಂಡರಾದ ಎಚ್.ಎಸ್.ಗೋಪಾಲ್, ಬೇಗೂರು ನಾಗರಾಜ್, ಜಿಕೆವಿಕೆ ಮಣ್ಣು ವಿಜ್ಞಾನಿ ಮುನಿನಾಗಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು ಫಲಾನುಭವಿಗಳು ಇದ್ದರು.
ಪಶುಗಣತಿಗೆ ಸಹಕರಿಸಿ: ಪಶು ಇಲಾಖೆಯಿಂದ 21 ಫಲಾನುಭವಿಗಳಿಗೆ 7 ಲಕ್ಷ ರೂ., ತೋಟಗಾರಿಕೆ ಇಲಾಖೆಯಿಂದ 36 ರೈತರಿಗೆ 36 ಲಕ್ಷ, ಕೃಷಿ ಇಲಾಖೆಯಿಂದ 36 ರೈತರಿಗೆ 17 ಲಕ್ಷ ಹಾಗೂ ರೇಷ್ಮೆ ಇಲಾಖೆಯಿಂದ 12 ಫಲಾನುಭಾವಿಗಳಿಗೆ 14 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಸವಲತ್ತುಗಳನ್ನು ವಿತರಿಸಿದರು. ತಾಲೂಕಿನಲ್ಲಿ ಪಶುಗಣತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರೈತರು ಯಾವುದೇ ಅಂಜಿಕೆಯಿಲ್ಲದೆ ಸೂಕ್ತ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿ. ಪ್ರತಿ 5 ವರ್ಷಗಳಿಗೊಮ್ಮೆ ನೆಡೆಯುವ ಪಶುಗಣತಿಯ ವರದಿ ಆಧಾರದಲ್ಲಿ ಸರ್ಕಾರ ರೈತರಿಗೆ, ಹೈನುಗಾರಿಕೆ ಮಾಡುವವರಿಗೆ ಸೂಕ್ತ ಸೌಲಭ್ಯ ಹಾಗೂ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದರು.