

ಮಂಡ್ಯ: ಕೃಷಿ ಇಲಾಖೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದಾಗ ಶೇ.97 ರಿಂದ 99ರಷ್ಟು ಸಾಧನೆಯಾಗಿರುವುದು ನೋಡಿದ್ದೇನೆ. ಈ ಬಾರಿ ಶೇ.100ರಷ್ಟು ಗುರಿ ಸಾಧಿಸಬೇಕು ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ಕೃಷಿ ನಡೆಸಲು ಟಿಲ್ಲರ್ ಯಂತ್ರೋಪಕರಣ ಸಿಕ್ಕರೆ ಅವರು ಸಂತೋಷದಿಂದ ಯಂತ್ರ ಬಳಸುತ್ತಾರೆ. ಆದ್ದರಿಂದ ರೈತರಿಗೆ ಪೂರಕವಾಗಿ ಕಾರ್ಯನಿರ್ವಹಿಸಿ ಎಂದರು.
ಬೆಳೆವಿಮೆ ಬಗ್ಗೆ ಜಾಗೃತಿ ಮೂಡಿಸಬೇಕು. ಹವಾಮಾನದ ವೈಪರೀತ್ಯದಲ್ಲಿ ಬೆಳೆ ಹಾನಿಯಾದ ಸಂದರ್ಭದಲ್ಲಿ ಬೆಳೆ ವಿಮೆಯ ಉಪಯುಕ್ತತೆಯ ಬಗ್ಗೆ ತಿಳಿಸಬೇಕು. ಹೆಚ್ಚು ರೈತರು ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ರೈತರಿಗೆ ಸೌಲಭ್ಯಗಳನ್ನು ನೀಡುವುದರಲ್ಲಿ ಅಧಿಕಾರಿಗಳು ಒಂದು ಹೆಜ್ಜೆ ಮುಂದಿರಬೇಕು. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ಸಹಾಯಧನ ದೊರೆಯಬೇಕು. ದ್ವಿತೀಯ ಕೃಷಿಯ ಉದ್ದೇಶಗಳಾದ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ ಮೂಲಕ ಉದ್ಯೋಗ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ರೈತ ಕುಟುಂಬಗಳಿಗೆ ವಿವಿಧ ಆದಾಯ ಮೂಲಗಳ ಸೃಜನೆಗೆ ಪೂರಕವಾಗಿ ಯೋಜನೆ ರೂಪಿಸಿ ಕೃಷಿಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ವಿಶೇಷ ಕಾಳಜಿ ವಹಿಸಿ ರೈತರಿಗೆ ಫ್ರೂಟ್ಸ್ ಆ್ಯಪ್‌ನಲ್ಲಿ ನೋಂದಣಿ ಮಾಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಉಪನಿರ್ದೇಶಕಿ ಮಾಲತಿ ಇತರರಿದ್ದರು.