ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಜ್ಜು

B C PATIL
Published on

ಹಾವೇರಿ: ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಕಳೆದ ಬಾರಿ ರಾಜ್ಯದಲ್ಲಿ ಶೇ. 107ರಷ್ಟು ಬಿತ್ತನೆಯಾಗಿ ಕೋವಿಡ್ ಸಮಯದಲ್ಲೂ ಸಾಧನೆಯಾಗಿತ್ತು. ಈ ಬಾರಿಯೂ ರೈತರಿಗೆ ಯಾವುದೇ ತೊಂದರೆಯಾಗದಂತೆ ಕೃಷಿ ಇಲಾಖೆ ಸಿದ್ಧಗೊಂಡಿದೆ. ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ವರ್ಷದಂತೆ ಈ ಬಾರಿಯೂ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಬಿತ್ತನೆ ಗುರಿ ಶೇ. 100ರಷ್ಟು ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೀಜ, ಗೊಬ್ಬರ, ಮಳೆಯ ವಿವರ: 2021-22ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನಲ್ಲಿ ಮೇ 28ರವರೆಗೆ 105 ಮಿ.ಮೀ. ಸಾಮಾನ್ಯ ಮಳೆಯಾಗಿದ್ದು, ಸರಾಸರಿ ಶೇ. 51ರಷ್ಟು ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳುವ ಗುರಿ ಹೊಂದಲಾಗಿದೆ. 101.38 ಲಕ್ಷ ಟನ್ ಆಹಾರ ಧಾನ್ಯ ಹಾಗೂ 10.85 ಲಕ್ಷ ಟನ್ ಎಣ್ಣೆಕಾಳು ಉತ್ಪಾದನೆ ಗುರಿಯಿದೆ ಎಂದು ಸಚಿವ ಪಾಟೀಲ ತಿಳಿಸಿದ್ದಾರೆ.

ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಪೂರ್ವ ಮುಂಗಾರು ಮಳೆಯಿಂದಾಗಿ ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭೂ ಸಿದ್ಧತೆ ಹಾಗೂ ಜೋಳ, ಹೆಸರು ಉದ್ದು, ಅಲಸಂದೆ, ಎಳ್ಳು, ಸೂರ್ಯಕಾಂತಿ, ಹತ್ತಿ ಸೇರಿ ಇತರೆ ಬೆಳೆಗಳ ಬಿತ್ತನೆ ಪ್ರಾರಂಭವಾಗಿದೆ. ಕರಾವಳಿ, ಮಲೆನಾಡು, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ನೈರುತ್ಯ ಮಾರುತ ಮಳೆಯು ಪ್ರಾರಂಭವಾದ ಬಳಿಕ ಭೂಮಿ ಸಿದ್ಧತೆ ಹಾಗೂ ಬಿತ್ತನೆ ಕಾರ್ಯಗಳು ಆರಂಭವಾಗಿವೆ. ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ, ಮೈಸೂರು, ಬೆಳಗಾವಿ ಹಾಗೂ ರಾಮನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಪೂರ್ವ ಮುಂಗಾರು ಮಳೆಯಾಗಿದ್ದು, ಮೇ 28ರವರೆಗೆ 3.06 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. ಇಲ್ಲಿಯವರೆಗಿನ ವರದಿ ಪ್ರಕಾರ 77 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಗೆ ಪ್ರತಿಯಾಗಿ 3.06 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಶೇ. 3.97ರಷ್ಟು ಬಿತ್ತನೆಯಾಗಿದೆ.

ಬಿತ್ತನೆ ಬೀಜಕ್ಕಿಲ್ಲ ಕೊರತೆ: ಲಾಕ್​ಡೌನ್ ಸಮಯದಲ್ಲಿಯೂ ಕೃಷಿ ಚಟುವಟಿಕೆಗೆ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಪ್ರಸಕ್ತ ಮುಂಗಾರು ಹಂಗಾಮಿಗೆ ಅಂದಾಜು 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, ಮೇ 28ರವರೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಇದುವರೆಗೂ 19,675 ಕ್ವಿಂಟಾಲ್​ಗಳಷ್ಟು ಬಿತ್ತನೆ ಬೀಜ ವಿತರಿಸಲಾಗಿದೆ. 1,74,653 ಕ್ವಿಂಟಾಲ್​ಗಳಷ್ಟು ಬೀಜ ಇನ್ನೂ ದಾಸ್ತಾನಿದೆ. ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ ಪೂರೈಸಲಾಗುತ್ತಿದ್ದು, ಬೀಜ ಪೂರೈಕೆಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

ರಸಗೊಬ್ಬರ ದಾಸ್ತಾನು: 2021-22ರ ಮುಂಗಾರು ಹಂಗಾಮಿನಲ್ಲಿ ಒಟ್ಟು 26.47ಲಕ್ಷ ಮೆಟ್ರಿಕ್ ಟನ್ ವಿವಿಧ ರಾಸಾಯನಿಕ ಗೊಬ್ಬರಗಳಿಗೆ ಬೇಡಿಕೆಯಿದ್ದು, ಇದರಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 7,97,662 ಮೆಟ್ರಿಕ್​ಟನ್ ರಸಗೊಬ್ಬರಗಳಿಗೆ ಬೇಡಿಕೆಯಿದ್ದು, ಮೇ 28ರವರೆಗೆ ಒಟ್ಟು 5,67,239 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜಾಗಿದೆ. ಅಲ್ಲದೆ, ಇನ್ನೂ ಒಟ್ಟು 12,38,600 ಮೆಟ್ರಿಕ್ ಟನ್​ಗಳಷ್ಟು ರಸಗೊಬ್ಬರ ದಾಸ್ತಾನಿದೆ. ಯಾವುದೇ ರಸಗೊಬ್ಬರದ ಸಮಸ್ಯೆ ಇರುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net