ನ್ಯಾನೋ ಯೂರಿಯಾ ಬಳಸಲು ಕೃಷಿ ಇಲಾಖೆ ಸಲಹೆ

Agri jd dr.m.kirankumar
ಕೃಷಿ ಜಂಟಿ ನಿರ್ದೇಶಕ ಡಾ. ಎಂ.ಕಿರಣ್‌ಕುಮಾರ್
Published on

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾದ್ಯಂತ ಜುಲೈ ತಿಂಗಳಿನಲ್ಲಿ ಸತತವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರೈತರು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡುವಂತೆ ಕೃಷಿ ಇಲಾಖೆ ಸಲಹೆ ನೀಡಿದೆ.

ಈ ಬಾರಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆ ಆಗಿದ್ದರೂ ಸತತವಾಗಿ ಪ್ರತಿ ದಿನ ಮಳೆ ಆಗುತ್ತಿರುವುದರಿಂದ ಯೂರಿಯಾ ಮೇಲುಗೊಬ್ಬರ ನೀಡುವುದು, ಎಡೆ ಕುಂಟೆ ಹೊಡೆಯುವುದು, ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳಲು ತೊಂದರೆ ಆಗುತ್ತಿದೆ. ಈ ನಿಟ್ಟಿನಲ್ಲಿ ರೈತರು ಶಿಫಾರಸ್ಸಿಗಿಂತ ಹೆಚ್ಚು ಯೂರಿಯಾವನ್ನು ಮಳೆಯಲ್ಲೇ ಅಥವಾ ಕೊಂಚ ಮಳೆ ಕಡಿಮೆಯಾದಾಗ ಕೊಡಲಾಗುತ್ತಿದೆ. ಈ ಹಂತದಲ್ಲಿ ಸಾರಜನಕ ಕೊರತೆ ಕಂಡುಬಂದರೂ ಯೂರಿಯಾವನ್ನು ಸರಿಯಾಗಿ ಮಣ್ಣಿನಲ್ಲಿ ಸೇರಿಸಲು ಸಾಧ್ಯವಿರದ ಕಾರಣ ಬೆಳೆಗಳು ಶೀತದಿಂದ ಬೇರುಗಳ ಬೆಳವಣಿಗೆ ಕುಂಠಿತವಾಗಿ ಗಿಡಗಳ ಬೆಳವಣಿಗೆ ಕುಂಠಿತವಾಗಿ ಇಳುವರಿ ಕುಸಿಯುವ ಸಾಧ್ಯತೆ ಇದೆ ಎಂದಿದ್ದಾರೆ.

ರೈತರು 4-5 ತಾಸು ಮಳೆ ಕಡಿಮೆ ಆದಾಗ ಯೂರಿಯಾ ಕೊಡುವ ಬದಲಾಗಿ ನ್ಯಾನೋ ಯೂರಿಯಾ (ಶೇ. 20 ಸಾರಜನಕ )-500 ಮಿ.ಲೀ. ಬಾಟಲಿ ಅಥವಾ ನ್ಯಾನೋ ಡಿಎಪಿ (ಶೇ. 8 ಸಾರಜನಕ ಮತ್ತು ಶೇ. 16 ರಂಜಕ)-500 ಮಿ.ಲೀ. ಬಾಟಲಿನಲ್ಲಿ ಲಭ್ಯ ಇರುವ ದ್ರವರೂಪದ ಸಾರಜನಕವನ್ನು ಪ್ರತಿ ಲೀಟರ್ ನೀರಿಗೆ 3ರಿಂದ 5 ಮಿ.ಲೀ. ಬೆರೆಸಿ ಸಿಂಪಡಿಸುವಂತೆ ಸಲಹೆ ನೀಡಿದೆ.

ದ್ರವ ಗೊಬ್ಬರವನ್ನು 30ರಿಂದ 35 ದಿನಗಳು ಮೊದಲನೇ ಹಂತ ಮತ್ತು 50ರಿಂದ 60 ದಿನಗಳಲ್ಲಿ ಸಿಂಪಡಿಸುವುದರಿಂದ ಪೋಷಕಾಂಶಗಳ ಸದ್ಭಳಕೆಯಾಗಿ ಉತ್ತಮ ಬೆಳೆ ಬೆಳವಣಿಗೆ ಮತ್ತು ಉತ್ತಮ ಇಳುವರಿ ಸಾಧ್ಯವಿದೆ. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಅಧಿಕ ಹರಡುವಿಕೆ ಸಾಮರ್ಥ್ಯ ಹೊಂದಿರುವುದರಿಂದ ಅವುಗಳನ್ನು ಇತರೆ ಕೀಟನಾಶಕ, ಶಿಲೀಂಧ್ರನಾಶಕ ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರಗಳೊಂದಿಗೆ ಸೇರಿಸಿ ಸಿಂಪಡಿಸಬಹುದು. ಮೇಲು ಗೊಬ್ಬರವಾಗಿ ಬಳಸುವ ಯೂರಿಯಾ ಚೀಲವನ್ನು ಶೇ. 50ರಷ್ಟು ಕಡಿಮೆ ಮಾಡಬಹುದು ಎಂದು ಕೃಷಿ ಜಂಟಿ ನಿರ್ದೇಶಕ ಡಾ. ಎಂ.ಕಿರಣ್‌ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net