

ಜಗದೀಶ ಹೊಂಬಳಿ ಬೆಳಗಾವಿ
ಆರು ವರ್ಷಗಳಿಂದ ಕೃಷಿ ಇಲಾಖೆಗೆ ಸಿಬ್ಬಂದಿ ನೇಮಕವಾಗದೇ ಈಗಿರುವ ಸಿಬ್ಬಂದಿ ಮೇಲೆ ಕಾರ್ಯಭಾರ ಹೆಚ್ಚಾಗಿದ್ದು, ರೈತರಿಗೆ ಅಗತ್ಯ ಮಾಹಿತಿ, ಸರ್ಕಾರಿ ಯೋಜನೆ ಮುಟ್ಟಿಸುವುದಕ್ಕೆ ಹಿನ್ನೆಡೆಯಾಗುತ್ತಿದೆ. ಇದರಿಂದ ರೈತರಿಗೆ ಕೃಷಿ ಬಗ್ಗೆ ಮಾಹಿತಿ ದೊರೆಯದೇ ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿರುವ 214 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳ ಪೈಕಿ 195 ಹುದ್ದೆಗಳು ಖಾಲಿ ಇವೆ. ಈ ಹುದ್ದೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಈ ಹಂತದ ಅಧಿಕಾರಿಗಳ ಹುದ್ದೆಗಳು ಭರ್ತಿಯಾಗುತ್ತಲೇ ಇಲ್ಲ. ಇದರ ಪರಿಣಾಮ ರೈತರಿಗೆ ಕೃಷಿ ಇಲಾಖೆಯ ಸೌಲಭ್ಯಗಳು ಸರಿಯಾಗಿ ತಲುಪುತ್ತಿಲ್ಲ. ನಿಯಮಿತವಾಗಿ ರೈತರಿಗೆ ಹೊಲಗಳಿಗೆ ಭೇಟಿ ನೀಡಿ, ತರಬೇತಿ ನೀಡುವುದು ಹಾಗೂ ತಾಂತ್ರಿಕ ಮಾಹಿತಿ ನೀಡುವ ಕಾರ್ಯಕ್ಕೂ ಹಿನ್ನೆಡೆಯಾಗಿದೆ.
ಸರ್ಕಾರದ ನಿರಾಸಕ್ತಿ:ಹೋಬಳಿ ಮಟ್ಟದಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಕೃಷಿ ಅಧಿಕಾರಿಗಳ 18 ಹುದ್ದೆಗಳು ಖಾಲಿ ಇವೆ. ಹೋಬಳಿಗಳಲ್ಲಿರುವ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಈ ಅಧಿಕಾರಿಗಳು ಸಕಾಲಕ್ಕೆ ರೈತರಿಗೆ ಅಗತ್ಯವಿರುವ ತಾಂತ್ರಿಕ ಮಾಹಿತಿ ನೀಡಬೇಕಾಗುತ್ತದೆ. ಆದರೆ, ಈ ಹುದ್ದೆಗಳು ಖಾಲಿ ಇರುವುದರಿಂದ ರೈತರಿಗೆ ಸಕಾಲಕ್ಕೆ ಮಾಹಿತಿ ಲಭಿಸುತ್ತಿಲ್ಲ. ಇನ್ನು ಸಹಾಯಕ ಕೃಷಿ ನಿರ್ದೇಶಕರ 2 ಹುದ್ದೆಗಳು ಖಾಲಿ ಇದೆ. ಕೃಷಿಕರಿಗೆ ಮಾಹಿತಿ, ಗ್ರಾಮ ಸಭೆ, ಪ್ರಗತಿ ಪರಿಶೀಲನೆ ಸಭೆ, ಇಲಾಖೆ ಸಭೆ ಇತ್ಯಾದಿಗಳಿಗೆ ಈಗಿರುವ ಸಿಬ್ಬಂದಿ ತೆರಳಿದರೆ ಕಚೇರಿಯೇ ಬಣ ಬಣ ಎನ್ನುತ್ತದೆ. ಅಗತ್ಯ ಸಿಬ್ಬಂದಿ ಇಲ್ಲದೇ ಇಲಾಖೆ ಸೊರಗಿದೆ. ಭರ್ತಿ ಮಾಡಿಕೊಳ್ಳುವುದಕ್ಕೆ ಸರ್ಕಾರ ಮಾತ್ರ ಆಸಕ್ತಿ ತೋರಿಸುತ್ತಿಲ್ಲ.
ನಿವೃತ್ತಿ ಬಳಿಕ ಭರ್ತಿಯಾಗಿಲ್ಲ: ಬೆಳಗಾವಿ ಕೃಷಿ ಇಲಾಖೆಯಲ್ಲಿ ಈ ಹಿಂದೆ ನಿವೃತ್ತಿ ಹೊಂದಿದ್ದ ಅಧಿಕಾರಿಗಳ ಸ್ಥಾನಕ್ಕೆ ಇದುವರೆಗೂ ಸಿಬ್ಬಂದಿ ನೇಮಕವಾಗಿಲ್ಲ. ಇದರಿಂದ ಇಲಾಖೆಯಲ್ಲಿ ಸಿಬ್ಬಂದಿ ಇಲ್ಲದೇ ಇರುವ ಕಾರಣಕ್ಕೆ ರೈತರೇ ಕಚೇರಿ ಬಾಗಿಲಿಗೆ ಬಂದರೂ ಯೋಜನೆ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡಲು ಆಗುತ್ತಿಲ್ಲ. ಕೂಡಲೇ ಸರ್ಕಾರ ಖಾಲಿ ಹುದ್ದೆಗಳಿಗೆ ಸಿಬ್ಬಂದಿ ನೇಮಿಸುವ ಮೂಲಕ ರೈತರ ಕಷ್ಟ ನಿವಾರಿಸಬೇಕು ಎಂಬುವುದು ರೈತರ ಆಗ್ರಹವಾಗಿದೆ.
ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ. ಸರ್ಕಾರ ಕೃಷಿ ಇಲಾಖೆಗೆ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಸಿದ್ದು, ನಮ್ಮ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿಯಾಗಲಿವೆ. ಕೆಳ ಹಂತದ ಸಿಬ್ಬಂದಿ ಸೇರಿ ಸಿಬ್ಬಂದಿ ಕೊರತೆ ಮಧ್ಯೆಯೂ ಇಲಾಖೆಯಿಂದ ಯಾವ ಕಾರ್ಯಗಳು ನಿಂತಿಲ್ಲ. ರೈತರಿಗೆ ಕಾಲ ಕಾಲಕ್ಕೆ ಅಗತ್ಯ ಮಾಹಿತಿ, ತರಬೇತಿ ನೀಡಲಾಗುತ್ತಿದೆ. ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ ಕೃಷಿ ಇಲಾಖೆ ಬೆಳಗಾವಿ