

ಬೆಳಗಾವಿ: ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟಿಸಿದರು.
ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೊದಗಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆ ರೈತರಿಗೆ ಮರಣ ಶಾಸನವಾಗಿದೆ. ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಯನ್ನು ತಕ್ಷಣವೇ ರದ್ದು ಪಡಿಸಬೇಕು. ಅಲ್ಲದೆ, ರೈತರ ಹೋರಾಟದ ಬಗ್ಗೆ ಅವಹೇಳನಕಾರಿಯಾಗಿ ಯಾರಾದರೂ ಮಾತನಾಡಿದರೆ ಶಾಂತಿಯುತವಾಗಿ ನಡೆಯುತ್ತಿರುವ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು. ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಜಿಲ್ಲಾ ರೈತ ಸಂಘಟನೆ, ಸಿಐಟಿಯುಸಿ, ಎಐಟಿಯುಸಿ, ಕೆಎಸ್‌ಆರ್‌ಟಿಸಿ, ಶೇತ್ಕರಿ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಮಾಜಿ ಮೇಯರ್ ನಾಗೇಶ ಸಾತೇರಿ, ಎಸ್.ಎಸ್. ಬಿಡ್ನಾಳ, ರಾಜು ಮರವೆ, ಜಿ.ವಿ. ಕುಲಕರ್ಣಿ, ಅಖಿಲಾ ಪಠಾಣ ಮತ್ತಿತರರಿದ್ದರು.