ಕೃಷಿ ತಿದ್ದುಪಡಿ ಕಾಯ್ದೆಗಳ ಜಾರಿಗೆ ಖಂಡನೆ: ನಾಳೆ ಬಳ್ಳಾರಿ ಜಿಲ್ಲೆ ಬಂದ್; ಹಲವಾರು ಸಂಘಟನೆಗಳ ಬೆಂಬಲ

Published on

ಬಳ್ಳಾರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೃಷಿ ವಿರೋಧಿ ಹಾಗೂ ಕಾರ್ಪೊರೇಟ್ ಕಂಪನಿಗಳ ಪರವಾದ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಸೆ.28ರಂದು ಜಿಲ್ಲೆ ಬಂದ್‌ಗೆ ರೈತ ಸಂಘರ್ಷ ಸಮನ್ವಯ ಸಮಿತಿ ಕರೆ ನೀಡಿದೆ.

ಕೇಂದ್ರ ಸರ್ಕಾರ ಕಾಯ್ದೆಗಳ ತಿದ್ದುಪಡಿ ವಿಚಾರವನ್ನು ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಿ ಸಂಸತ್ತಿನಲ್ಲಿ ಮಂಡಿಸಬೇಕಿತ್ತು. ಆದರೆ, ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕಾಯ್ದೆಗಳು ರೈತರ ಬೇಡಿಕೆ ಪಟ್ಟಿಯಲ್ಲಿ ಇರಲಿಲ್ಲ. ಅವಸರದಲ್ಲಿ ಕಾಯ್ದೆಗಳನ್ನು ಜಾರಿಗೆ ತರುವ ಅಗತ್ಯ ಏನಿದೆ ಎಂದು ತುಂಗಭದ್ರಾ ರೈತಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು ಹಾಗೂ ಪ್ರಾಂತ ರೈತಸಂಘದ ಜಿಲ್ಲಾ ಅಧ್ಯಕ್ಷ ವಿ.ಎಸ್.ಶಿವಶಂಕರ ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ತಿದ್ದುಪಡಿ ಕಾಯ್ದೆಯಿಂದ ರೈತರು, ಕೃಷಿ ಕೂಲಿಕಾರರು, ಎಪಿಎಂಸಿ ವರ್ತಕರು, ಬಿತ್ತನೆ ಬೀಜ, ರಸಗೊಬ್ಬರ ವ್ಯಾಪಾರಿಗಳು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು, ಸಂಘ, ಸಂಸ್ಥೆಗಳು ಹಾಗೂ ಜನರು ಬಂದ್‌ಗೆ ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಬೇಕೆಂದು ಕೋರಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಂಗನಕಲ್ಲು ಕೃಷ್ಣ, ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಇ.ಹನುಮಂತಪ್ಪ, ಕರವೇ ಜಿಲ್ಲಾ ಅಧ್ಯಕ್ಷ ಚಾನಾಳ್ ಶೇಖರ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜೆ.ಸತ್ಯಬಾಬು, ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಪರ್ವೀನ್ ಬಾನು ಇತರರು ಇದ್ದರು.

ಇವರದ್ದೂ ಇದೆ ಬೆಂಬಲ: ಬಂದ್ ಬೆಂಬಲಿಸುವುದಾಗಿ ಜನಸೈನ್ಯ ಅಧ್ಯಕ್ಷ ಕೆ.ಎರ‌್ರಿಸ್ವಾಮಿ ಹಾಗೂ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಜೆ.ಪಿ.ರವಿಕಿರಣ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net