ಕೃಷಿ ಚಟುವಟಿಕೆ ಅಣಿಯಾದ ರೈತರು

21 LNG 01
ಲಿಂಗಸುಗೂರು ಸಮೀಪ ಐದನಾಳ ಗ್ರಾಮದ ಜಮೀನಿನಲ್ಲಿ ಭತ್ತ ನಾಟಿ ಮಾಡಲು ಭೂಮಿ ಹದ ಮಾಡುತ್ತಿರುವ ರೈತರು.
Published on

ಲಿಂಗಸುಗೂರು: ನಾರಾಯಣಪುರ, ರಾಂಪೂರ ಏತನೀರಾವರಿ ಕಾಲುವೆಗಳಿಗೆ ಕಳೆದ ವಾರದಿಂದ ನೀರು ಹರಿಸಲಾಗುತ್ತಿದ್ದು ಕಾಲುವೆ ಜಾಲದಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಪ್ರತಿ ವರ್ಷದಂತೆ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯಲು ರೈತರು ಮುಂದಾಗಿದ್ದಾರೆ. ಬೆಂಗಳೂರಲ್ಲಿ ಜುಲೈ 1 ರಂದು ನಡೆದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಜುಲೈ 8ರಿಂದ ನಾರಾಯಣಪುರ ಜಲಾಶಯದ ಬಲದಂಡೆ ಕಾಲುವೆ, ರಾಂಪೂರ ಏತ ನೀರಾವರಿ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಆದ್ದರಿಂದ ಕಾಲುವೆ ಜಾಲದ ರೈತರು ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ. ತಾಲೂಕಿನಲ್ಲಿ ಸಮರ್ಪಕ ಮಳೆ ಕೊರತೆಯಿಂದ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಅಗತ್ಯವಾಗಿತ್ತು. ರೈತರು ಕಾಲುವೆ ನೀರಿಗೆ ಕಾಯುತ್ತಿದ್ದರು. ಮಹಾರಾಷ್ಟ್ರ, ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಜೂನ್‌ನಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ನಾರಾಯಣಪುರ ಜಲಾಶಯ ಭರ್ತಿಯಾಗಿ ಈಗ ನೀರು ಹರಿಸುತ್ತಿರುವುದರಿಂದ ರೈತರಿಗೆ ಅನುಕೂಲವಾಗಿದೆ. ನೀರಾವರಿ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲು ರೈತರು ಭೂಮಿ ಹದಮಾಡಿಕೊಳ್ಳುತ್ತಿದ್ದಾರೆ. ತ್ತನೆಗೆ ಬೇಕಾಗುವ ಸಸಿಗಳನ್ನು ಉತ್ಪಾದಿಸಲು ಮಡಿಗಳನ್ನು ಸಿದ್ಧಪಡಿಸಿ ಸಸಿ ಬೆಳೆಸಿದ್ದಾರೆ. ಲಿಂಗಸುಗೂರು ಹೋಬಳಿಯಲ್ಲಿ 3,650 ಹೆಕ್ಟೇರ್, ಗುರುಗುಂಟಾ ಹೋಬಳಿಯಲ್ಲಿ 2,400 ಹೆಕ್ಟೇರ್, ಮುದಗಲ್ಲ ಹೋಬಳಿಯಲ್ಲಿ 450 ಹೆಕ್ಟೇರ್ ಒಟ್ಟು 6,500 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿದೆ. ನಾರಾಯಣಪುರ ಬಲದಂಡೆ ಕಾಲುವೆಯ ಮೂಲಕ ರೋಡಲಬಂಡಾ (ಯುಕೆಪಿ), ಗೊರೇಬಾಳ, ಗುಂತಗೋಳ, ಕಾಳಾಪೂರ, ಗುರುಗುಂಟಾ, ರಾಯದುರ್ಗ, ಗೌಡೂರು, ಚಿಕ್ಕಲದೊಡ್ಡಿ ಭಾಗದಲ್ಲಿ ಹಾಗೂ ರಾಂಪೂರ ಏತ ನೀರಾವರಿ ನಾಲೆಯಿಂದ ನವಲಿ, ಚಿತಾಪೂರ, ಐದನಾಳ, ನರಕಲದಿನ್ನಿ, ರಾಂಪೂರ, ಕಳ್ಳಿ ಲಿಂಗಸುಗೂರು, ಹುನಕುಂಟಿ, ಈಚನಾಳ, ಆನಾಹೊಸೂರು, ಬೆಂಡೋಣಿ ಭಾಗದಲ್ಲಿ ಭತ್ತ ನಾಟಿ ಮಾಡಲು ಭೂಮಿ ಹದಮಾಡಿಕೊಳ್ಳಲಾಗುತ್ತಿದೆ. ಕಳೆದ 10ವರ್ಷಗಳಿಂದ ನಾರಾಯಣಪುರ ಬಲದಂಡೆ ನಾಲೆ ನೀರಿನಿಂದ ಭತ್ತ ಬೆಳೆಯುತ್ತಾ ಬಂದಿದ್ದೇನೆ. ಈ ಬಾರಿಯೂ ಮುಂಗಾರು ಹಂಗಾಮಿಗೆ ಭತ್ತ ನಾಟಿ ಮಾಡಲು ಸಸಿ ಮಡಿ ಬೆಳೆಸಿದ್ದು ಭೂಮಿ ಹದಮಾಡುತ್ತಿದ್ದೇನೆ. ಆದಪ್ಪಗೌಡ ಪಗಾದ ಐದನಾಳ ಗ್ರಾಮದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net