ಕೃಷಿ ಕಾರ್ಮಿಕರಿಗೆ ವಿಮಾನಯಾನ ಭಾಗ್ಯ!

flight
ಪ್ರಯಾಣಕ್ಕೂ ಮುನ್ನ ಕೃಷಿ ಕೂಲಿ ಕಾರ್ಮಿಕ ಮಹಿಳೆಯರೊಂದಿಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಶ್ವನಾಥ್ ಫೋಟೋಶೂಟ್.
Published on

ಶಿವಮೊಗ್ಗ: ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪಯಣಿಸಿ ಆಗಸದಲ್ಲಿ ಹಾರಾಡಿದ ಅನುಭವ ಪಡೆಯಬೇಕೆಂಬುದು ಬಹುತೇಕರ ಹೆಬ್ಬಯಕೆ. ಆದರೆ ಬಡ ಮತ್ತು ಮಧ್ಯಮ ವರ್ಗದವರಿಗೆ ತುಸು ಕಷ್ಟವೇ ಸರಿ. ಆದರೆ ಇಲ್ಲೊಬ್ಬರು ತಮ್ಮ ತೋಟದ 11 ಮಂದಿ ಕೃಷಿ ಕಾರ್ಮಿಕ ಮಹಿಳೆಯರ ಆಸೆಯನ್ನು ಪೂರೈಸಿದ್ದಾರೆ. ಅವರನ್ನು ಮಂಗಳವಾರ ವಿಮಾನದಲ್ಲಿ ಗೋವಾಕ್ಕೆ ಪ್ರವಾಸ ಕರೆದೊಯ್ದಿದ್ದಾರೆ. ಫೆ.20ರಂದು ಅಲ್ಲಿಂದ ವಿಮಾನದಲ್ಲೇ ಮರಳಲು ಟಿಕೆಟ್ ಕಾಯ್ದಿರಿಸಿದ್ದಾರೆ.

ಇಂಥ ಹೃದಯವಂತಿಕೆ ತೋರಿದವರು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಶಿರಗಾನಹಳ್ಳಿಯ ರೈತ ವಿಶ್ವನಾಥ್. ಇವರು ಅನೇಕ ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇದನ್ನು ಗಮನಿಸಿದ್ದ ಇವರ ತೋಟದ ಕೃಷಿ ಕೂಲಿ ಕಾರ್ಮಿಕ ಮಹಿಳೆಯರು ನಮ್ಮನ್ನೂ ಒಮ್ಮೆ ವಿಮಾನದಲ್ಲಿ ಕರೆದೊಯ್ಯಬೇಕೆಂಬ ಬೇಡಿಕೆ ಇರಿಸಿದ್ದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ವಿಶ್ವನಾಥ್ ಅವರೆಲ್ಲರನ್ನೂ ಶಿವಮೊಗ್ಗಕ್ಕೆ ಕರೆತಂದು ಅವರೊಂದಿಗೆ ಇಲ್ಲಿಂದ ಸ್ಟಾರ್‌ಏರ್‌ಲೈನ್ಸ್ ಮೂಲಕ ಗೋವಾಕ್ಕೆ ಹಾರಿದ್ದಾರೆ. ಎರಡು ದಿನ ಅವರೆಲ್ಲರಿಗೂ ಗೋವಾದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲಿದ್ದಾರೆ. ವಿಶ್ವನಾಥ್ ಈಗಾಗಲೇ ವಿಮಾನ ನಿಲ್ದಾಣ ಹಾಗೂ ವಿಮಾನದೊಳಗೆ ಕೃಷಿ ಕಾರ್ಮಿಕ ಮಹಿಳೆಯರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ತೋಟದ ಕೆಲಸಗಾರ ಮಹಿಳೆಯರನ್ನು ತಿರುಪತಿಗೆ ಕರೆದೊಯ್ದು ವೆಂಕಟೇಶ್ವರನ ದರ್ಶನ ಮಾಡಿಸಲು ವಿಶ್ವನಾಥ್ ಬಯಸಿದ್ದರು. ಅಲ್ಲಿಗೆ ಫ್ಲೈಟ್ ಟಿಕೆಟ್ ಸಿಗದ ಕಾರಣ ಗೋವಾಕ್ಕೆ ಕರೆದೊಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net