

ಮಂಡ್ಯ: ತಾಲೂಕಿನ ವಿ.ಸಿ ಫಾರ್ಮ್‌ನಲ್ಲಿ ನೂತನ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಉಭಯ ಸದನದಲ್ಲಿ ಕೃಷಿ ವಿಜ್ಞಾನಗಳ(ತಿದ್ದುಪಡಿ) ವಿಶ್ವವಿದ್ಯಾಲಯಗಳ ವಿಧೇಯಕವನ್ನು ಮಂಡನೆ ಮಾಡಿದರು. ಅಂತೆಯೇ ಈ ವಿಧೇಯಕವನ್ನು ಅಂಗೀಕರಿಸಲಾಯಿತು. ಈ ಮೂಲಕ ಮೈಸೂರು ಭಾಗದ ಜನರ ಬಹು ವರ್ಷಗಳ ಕನಸನ್ನು ಚಲುವರಾಯಸ್ವಾಮಿ ಅಧಿವೇಶನದಲ್ಲಿ ನನಸು ಮಾಡಿದರು.
ಜಿಲ್ಲೆಯಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭಕ್ಕೆ ರಾಜ್ಯ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿತ್ತು. ಮಾತ್ರವಲ್ಲದೆ ಇದಕ್ಕೆ ಪೂರಕವಾಗಿ ಕೆಲ ಪ್ರಕ್ರಿಯೆಗಳು ನಡೆಯುತ್ತಿದ್ದವು. ಇದರ ಮುಂದಿನ ಭಾಗವಾಗಿ 2025ನೇ ಸಾಲಿನ ಮಂಡ್ಯ ಕೃಷಿ ವಿಜ್ಞಾನಗಳ (ತಿದ್ದುಪಡಿ) ವಿಶ್ವವಿದ್ಯಾಲಯಗಳ ವಿಧೇಯಕವನ್ನು ಉಭಯ ಸದನದಲ್ಲಿ ಮಂಡಿಸಿದರು. ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರವಾಗಿ ಬಂದಿದ್ದ ವಿಧೇಯಕವನ್ನು ಗುರುವಾರ ವಿಧಾನ ಪರಿಷತ್‌ನಲ್ಲಿ ಅಧಿಕೃತವಾಗಿ ಅಂಗೀಕರಿಸುವ ಮೂಲಕ ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಚಾಲನೆ ಸಿಕ್ಕಂತಾಯಿತು.
ಕೃಷಿ ವಿವಿಯ ಯಶೋಗಾಥೆ: ಕೃಷಿಯನ್ನೇ ನಂಬಿಕೊಂಡಿರುವವರಿಗೆ ವರದಾನವಾಗಲೆನ್ನುವ ಕಾರಣಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1931ರಲ್ಲಿ ಗಾಣದಾಳು ಗ್ರಾಮದ ಸಮೀಪ ರಾಜಮನೆತನಕ್ಕೆ ಸೇರಿದ 650 ಎಕರೆ ಜಮೀನನ್ನು ಅಂದಿನ ಕೃಷಿ ವಿಜ್ಞಾನಿಯಾಗಿದ್ದ ಡಾ.ಲೆಸ್ಲಿ ಕೋಲ್ಮನ್ ಅವರಿಗೆ ಒಪ್ಪಿಸುತ್ತಾರೆ. ಇದರ ವಿಶೇಷವೆಂದರೆ ಇದು ದೇಶದಲ್ಲಿಯೇ ಮೊಟ್ಟಮೊದಲ ಹಾಗೂ ವಿಸ್ತಾರವಾದಂತಹ ಸಂಶೋಧನೆಗೆ ಒಳಪಟ್ಟ ಪ್ರದೇಶ. ಇದಕ್ಕೆ ಕೆಆರ್‌ಎಸ್ ಡ್ಯಾಂನಿಂದ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗಿತ್ತು. ಇನ್ನು ಕೋಲ್ಮನ್ ಅವರ ದೂರದೃಷ್ಟಿಯಂತೆ ಸುಸಜ್ಜಿತವಾದ ಪ್ರಯೋಗಶಾಲೆ, ವ್ಯವಸ್ಥಿತವಾದ ಕಚೇರಿ, ತರಬೇತಿ ಕೊಠಡಿ, ಎಲ್ಲ ಸಿಬ್ಬಂದಿಗೆ ವಸತಿಗೃಹ ಒಳಗೊಂಡಂತೆ ವಿವಿಗೆ ಬೇಕಾಗುವ ಎಲ್ಲ ಸೌಲಭ್ಯವನ್ನು 1950ರೊಳಗೆ ಪೂರೈಸಿದರು.
ಮೈಸೂರು ರಾಜ್ಯದಲ್ಲಿ ಬೆಳೆಯುತ್ತಿದ್ದ ಎಲ್ಲ ಬೆಳೆಗಳ ಬಗ್ಗೆಯೂ ವಿ.ಸಿ ಫಾರ್ಮ್‌ನಲ್ಲಿ ಸಂಶೋಧನೆ ನಡೆಯುತ್ತಿತ್ತು. 1931ರಿಂದ 1960ರವರೆಗೆ ಕೃಷಿಯಲ್ಲಿ ಸಂಶೋಧನೆ, ವಿಸ್ತರಣೆ ಮತ್ತು ತರಬೇತಿ ಕಾರ್ಯಕ್ರಮ ಅತ್ಯುನ್ನತ ಮಟ್ಟದಲ್ಲಿ ನಡೆಯುತ್ತಿತ್ತು. ಈ ನಡುವೆ 1963ರ ದಶಕದಲ್ಲಿ ಹೆಬ್ಬಾಳದಲ್ಲಿದ್ದ 30 ಎಕರೆ ಜಮೀನಿನಲ್ಲಿ ನಡೆಯುತ್ತಿದ್ದ ಕೃಷಿ ಪಾಠಶಾಲೆಯನ್ನು ವಿವಿಯಾಗಿ ಮೇಲ್ದರ್ಜೆಗೆ ಏರಿಸಲಾಯಿತು. ದಿನ ಕಳೆದಂತೆ ವಿ.ಸಿ ಫಾರ್ಮ್‌ನಲ್ಲಿ ನಡೆಯುತ್ತಿದ್ದ ಸಂಶೋಧನಾ ಚಟುವಟಿಕೆ ಒಂದೊಂದಾಗಿ ಬೆಂಗಳೂರಿಗೆ ವರ್ಗಾಯಿಸಲಾಯಿತು. ಕೊನೆಗೆ ರಾಗಿ, ಭತ್ತ, ಕಬ್ಬು ಸಂಶೋಧನೆಯಷ್ಟೇ ಉಳಿಯುವಂತಾಯಿತು.
ಭಾರತದಲ್ಲಿ ಅತಿ ದೊಡ್ಡ ಎಳನೀರಿನ ಮಾರುಕಟ್ಟೆ ಮಂಡ್ಯದಲ್ಲಿದೆ. ಮಾತ್ರವಲ್ಲದೆ ರೇಷ್ಮೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಇದೆ. ಮೈಸೂರು ವಿಭಾಗದಲ್ಲಿ ಹೆಚ್ಚಿನ ಅರಣ್ಯ ಪ್ರದೇಶವೂ ಇರುವುದರಿಂದ ಮಂಡ್ಯದಲ್ಲಿ ಸಮಗ್ರ ಕೃಷಿ ವಿವಿ ಸ್ಥಾಪಿಸುತ್ತಿರುವ ಅತ್ಯಂತ ಸೂಕ್ತ. ಬೆಂಗಳೂರಿನ ಕೃಷಿ ವಿವಿಯಲ್ಲಿ ಬಹಳಷ್ಟು ಪದವಿ ಪ್ರಾರಂಭಿಸಲಾಗಿದೆ. ಆದರೆ ವಿ.ಸಿ ಫಾರ್ಮ್‌ನಲ್ಲಿ ಪದವಿಯನ್ನೊಳಗೊಂಡ ಕಾಲೇಜು ಪ್ರಾರಂಭವಾಗಿಲ್ಲ. ಪರಿಣಾಮ ವಿ.ಸಿ ಫಾರ್ಮ್ ಬೆಳವಣಿಗೆ ಕಾಣಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ ನೋಡಿದರೆ ಬೆಂಗಳೂರಿಗಿಂತಲೂ ಇಲ್ಲಿ ಹೆಚ್ಚಿನ ಕಾರ್ಯಕ್ರಮ ಅನುಷ್ಠಾನಗೊಳಿಸಬಹುದು. ಈ ನಿಟ್ಟಿನಲ್ಲಿ ಕೃಷಿ ವಿವಿ ಪ್ರಾರಂಭ ಅನಿವಾರ್ಯವಾಗಿತ್ತು. ಗಮನಾರ್ಹ ವಿಷಯವೆಂದರೆ ರಾಜ್ಯದ ಕಂದಾಯ ವಿಭಾಗದಲ್ಲಿ ಮೈಸೂರನ್ನು ಹೊರತುಪಡಿಸಿ ಉಳಿದೆಡೆ ಒಂದಕ್ಕಿಂತ ಹೆಚ್ಚು ಕೃಷಿ ಮತ್ತು ತೋಟಗಾರಿಕೆ ಹಾಗೂ ವೈದ್ಯಕೀಯ ವಿವಿ ಇದೆ. ಈ ಹಿನ್ನೆಲೆಯಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರು ವಿ.ಸಿ.ಫಾರ್ಮ್‌ನಲ್ಲಿರುವ ಕೃಷಿ ಮಹಾವಿದ್ಯಾನಿಲಯವನ್ನು ಮೇಲ್ದರ್ಜೆಗೇರಿಸಿ ಪ್ರತ್ಯೇಕ ವಿವಿ ಮಾಡಲು ಮಹತ್ವದ ಯೋಜನೆ ರೂಪಿಸುವುದರ ಜತೆಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ.
ಸಿಕ್ಕಿತು ಹಸಿರು ನಿಶಾನೆ: ವಿ.ಸಿ ಫಾರ್ಮ್‌ನಲ್ಲಿ ನೂತನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿತ್ತು. ಇದೀಗ ಉಭಯ ಸದನಗಳಲ್ಲಿ ತಿದ್ದುಪಡಿ ವಿಧೇಯಕ ಅಂಗೀಕಾರ ಆಗುವ ಮೂಲಕ ಮಂಡ್ಯ ಜಿಲ್ಲೆ ಸೇರಿದಂತೆ ಮೈಸೂರು ವಿಭಾಗದ ಜನರ ಬಹುದಿನಗಳ ಕನಸು ಈಡೇರಿದೆ.
2024-25ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಸಾಧ್ಯತೆ ಕುರಿತು ಪರಿಶೀಲನೆಗೆ ಸಮಿತಿ ರಚಿಸುವುದಾಗಿ ಘೋಷಣೆ ಮಾಡಿದ ಒಂದು ವರ್ಷದೊಳಗೆ ವಿವಿ ಪ್ರಾರಂಭಕ್ಕೆ ಇದೀಗ ಹಸಿರು ನಿಶಾನೆ ದೊರಕಿದೆ. ಕೃಷಿ ಸಚಿವ ಚಲುವರಾಯಸ್ವಾಮಿ ಅವರರ ವಿಶೇಷ ಕಾಳಜಿ, ನಿರಂತರ ಪರಿಶ್ರಮ ಶೀಘ್ರವೇ ಫಲ ನೀಡುವಂತೆ ಮಾಡಿದೆ. ಇದಕ್ಕಾಗಿ ಸಚಿವ ಸಿಆರ್‌ಎಸ್ ಸಿಎ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ನನ್ನ ಕನಸು ಸಾಕಾರಗೊಂಡ ಕ್ಷಣ...!
ಈ ದಿನ ನನ್ನ ಜೀವನದ ಅತ್ಯಂತ ಸಂಭ್ರಮದ ಕ್ಷಣವಾಗಿದೆ. ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳು 2025ನೇ ಸಾಲಿನ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ ನೀಡಿದ್ದು, ನನಗೆ ಅಪಾರ ಹರ್ಷ ಮತ್ತು ಆನಂದವನ್ನು ಉಂಟುಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ನನ್ನ ಜನ್ಮಭೂಮಿ, ನನ್ನ ಊರು ಮಂಡ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಇರುವ ಈ ಪುಣ್ಯಭೂಮಿಯು ಕೃಷಿಕರ ಕಲ್ಪವೃಕ್ಷವಾಗಬೇಕು ಎಂಬುದು ನನ್ನ ಜೀವನದ ಮಹತ್ವದ ಕನಸಾಗಿತ್ತು. ಆ ಕನಸು ಇಂದು ನನಸಾಗುವ ಹಾದಿಯಲ್ಲಿ ಸಾಗುತ್ತಿದೆ. ಜಿಲ್ಲೆಯಲ್ಲಿ ಒಂದು ಕೃಷಿ ವಿಶ್ವವಿದ್ಯಾಲಯ ನಿರ್ಮಾಣ ಮಾಡಬೇಕು ಎನ್ನುವ ನನ್ನ ಕನಸು ಹಾಗೂ ನನ್ನ ಜನತೆಯ ಬಹು ಕಾಲದ ಬೇಡಿಕೆ ಈಡೇರುತ್ತಿದೆ. ನನ್ನ ಜಿಲ್ಲೆಯ ಜನತೆ ಹಾಗೂ ರಾಜ್ಯದ ಎಲ್ಲ ಕೃಷಿಕರ ಅಭ್ಯುದಯದ ಗುರಿಯೊಂದಿಗೆ ಈ ಕೃಷಿ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸಲಿದ್ದು, ಕೃಷಿಯಲ್ಲಿ ನಾವೀನ್ಯತೆಯನ್ನು ಕಂಡುಕೊಳ್ಳಲು, ವಿಜ್ಞಾನವನ್ನು ಅಳವಡಿಸಲು, ಮುಂದಿನ ಪೀಳಿಗೆಗೆ ಕೃಷಿ ಕ್ಷೇತ್ರದ ಬಗ್ಗೆ ಇನ್ನೂ ಹೆಚ್ಚಿನ ಒಲವನ್ನು ಬೆಳೆಸಲು ನೆರವಾಗಲಿದೆ ಎಂದಿದ್ದಾರೆ.
ಕೃಷಿ ಪರಂಪರೆಗೆ ಹೆಸರಾಗಿರುವ ನಮ್ಮ ಮಂಡ್ಯ ಜಿಲ್ಲೆಯಿಂದ ಪ್ರಥಮ ಬಾರಿಗೆ ಕೃಷಿ ಸಚಿವನಾಗಿ ಆಯ್ಕೆಯಾಗಿ ಇಂತಹ ಒಂದು ಸತ್ಕಾರ್ಯ ಮಾಡುವ ಸದಾವಕಾಶ ದೊರಕಿರುವುದು ನನ್ನ ಸೌಭಾಗ್ಯ. ನಾಡಿನ ಅನ್ನದಾತರ ಶ್ರೇಯೋಭಿವೃದ್ಧಿಗೆ ನನ್ನ ಶ್ರಮ ನಿರಂತರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.