

ರಾಯಚೂರು: ಕೃಷಿ ವಿಶ್ವವಿದ್ಯಾಲಯಗಳು ಸಿರಿಧಾನ್ಯಗಳ ಸಂಶೋಧನೆ, ಬೀಜ ಕೇಂದ್ರ ಹಾಗೂ ವೌಲ್ಯವರ್ಧನೆ ಬೆಳವಣಿಗೆಗೆ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಕೃಷಿ ಖಾತೆ ಸಚಿವ ಚೆಲುವರಾಯ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯ ಆವರಣದಲ್ಲಿ ನಬಾರ್ಡ್ ನೆರವಿನಲ್ಲಿ ಸಿರಿಧಾನ್ಯಗಳ ವೌಲ್ಯ ಸರಪಳಿ ಉದ್ಯಾನವನ ನಿರ್ಮಾಣಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿ, ಸಿರಿಧಾನ್ಯಗಳ ಬೆಳವಣಿಗೆ ಬಹುದಿನಗಳ ಕನಸು ನನಸಾಗಿದ್ದು, ಶೀಘ್ರದಲ್ಲಿ ಉದ್ಯಾನವನ ನಿರ್ಮಾಣವಾಗಲಿದೆ ಎಂದರು.
ಶೀಘ್ರದಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಗಳಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಬೇಕು. ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಉದ್ಯಾನವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಸಿರಿಧಾನ್ಯಗಳ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ಒದಗಿಸಿ ಮಾರುಕಟ್ಟೆ, ಉತ್ತಮ ಬೆಲೆ ಒದಗಿಸುವ ಕೆಲಸವಾಗಬೇಕಾಗಿದೆ. ಅದಕ್ಕೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ ಎಂದರು ತಿಳಿಸಿದರು.
ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಮಾತನಾಡಿ, ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಲು ನಬಾಡ್ನಿಂದ 25 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ. ಸಿರಿಧಾನ್ಯ ತಳಿಗಳ ಸಂಶೋಧನೆ, ಬೀಜ ಪೂರೈಕೆ, ಮಾರುಕಟ್ಟೆ ಒದಗಿಸುವ ಕೆಲಸ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಬಸನಗೌಡ ಬ್ಯಾಗವಾಟ, ಮಲ್ಲಿಕಾರ್ಜುನ, ಕುಲಸಚಿವ ಡಾ.ಎಂ.ವೀರನಗೌಡ, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ ಉಪಸ್ಥಿತರಿದ್ದರು.