

ಆಲೂರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಹೇಳಿದರು.
ತಾಲೂಕಿನ ಬೈರಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷ ಮತ್ತು ನಿರ್ದೇಶಕರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನತೆಗೆ ಕೃಷಿ ಪತ್ತಿನ ಸಹಕಾರ ಸಂಘಗಳು ತುಂಬ ಅನುಕೂಲವಾಗಿವೆ. ಇವುಗಳಿಂದ ಸಾಲ ಪಡೆದುಕೊಂಡು ರೈತರು ಕೃಷಿ ಚಟುವಟಿಕೆಗೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕಿದೆ. ಜಿಲ್ಲಾ ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ ಸಾಕಷ್ಟು ಸೌಲಭ್ಯ ನೀಡಲಾಗುತ್ತದೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಹೇಳಿದರು.
ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ದಿನಪೂರ್ತಿ ಆಲೂರು ಪಟ್ಟಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜತೆ ವ್ಯವಹರಿಸಬೇಕಾದ ಪರಿಸ್ಥಿತಿ ಇದ್ದರಿಂದ ಸಾಮಾನ್ಯರಿಗೆ ಅನುಕೂಲವಾಗಲೆಂದು ಬೈರಾಪುರ ಗ್ರಾಮದಲ್ಲಿ ಸಂಘ ತೆರೆದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ರೈತರು ಇನ್ನು ಮುಂದೆ ಗ್ರಾಮದ ಸಹಕಾರ ಸಂಘದಲ್ಲಿ ವ್ಯವಹರಿಸಬೇಕು ಎಂದರು. ನೂತನ ಅಧ್ಯಕ್ಷ ಸಿ.ಡಿ.ಆಶೋಕ್, ಉಪಾಧ್ಯಕ್ಷ ಆಶಾರಾಣಿ, ನಿರ್ದೇಶಕರಾಗಿ ಕೃಷ್ಣಗೌಡ, ಜ.ಕೆ.ಗಿರೀಶ್, ಜಯರಾಮ್ ಧರ್ಮಪುರಿ ಶಾರದಮ್ಮ ವೆಂಕಟೇಶ್, ಮಧು ಕುಮಾರ್, ಎಸ್.ಎನ್.ಮಂಜೇಗೌಡ, ಸಿ.ಎಂ.ಪಾಲಾ, ಎಚ್‌ಡಿಸಿಸಿ ಬ್ಯಾಂಕ್ ವಿಸ್ತರಣಾಧಿಕಾರಿ ರಾಘವೇಂದ್ರ ಇದ್ದರು.