ಕೃಷಿ ವಿಜ್ಞಾನಗಳ ವಿವಿ ಘಟಿಕೋತ್ಸವ ನಾಳೆ

DSC_4813
Published on

ರಾಯಚೂರು: ನಗರದ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ವಿವಿಯ 13ನೇ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ, ಐಸಿಎಆರ್‌ನ ತಾಂತ್ರಿಕ ವಿಭಾಗದ ಉಪ ಮಹಾನಿರ್ದೇಶಕ ಡಾ.ಎಸ್.ಎನ್.ಝಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಘಟಿಕೋತ್ಸವದಲ್ಲಿ 363 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 127 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 26 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುತ್ತಿದ್ದು, ಸ್ನಾತಕ ಪದವಿಯಲ್ಲಿ 23 ಚಿನ್ನದ ಪದಕ, ಸ್ನಾತಕೋತ್ತರ ಪದವಿಯಲ್ಲಿ 16 ಚಿನ್ನದ ಪದಕ, ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೆ 13 ಚಿನ್ನದ ಪದಕ ಪ್ರದಾನ ಮಾಡಲಾಗುತ್ತಿದೆ.
2021-22ನೇ ಸಾಲಿನಲ್ಲಿ 13 ವಿವಿಧ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಜೋಳ, ಕೊರಲೆ, ಹೆಸರು, ಸೂರ್ಯಕಾಂತಿ, ಮೇವಿನ ಜೋಳದಲ್ಲಿ ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಕೊರಲೆ ಎಚ್‌ಬಿಆರ್-2 ತಳಿ ದೇಶದಲ್ಲಿಯೇ ಬಿಡುಗಡೆಗೊಂಡ ಮೊದಲ ತಳಿಯಾಗಿದೆ.
ವಿವಿಯಿಂದ ಇದುವರೆಗೂ 537 ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಕೃಷಿ ವಿಜ್ಞಾನ ಕೇಂದ್ರಗಳಿಂದ ರೈತರಿಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ವಿವಿ ಅಭಿವೃದ್ಧಿ ಪಡಿಸಿದ ಇ ಸ್ಯಾಪ್ ತಂತ್ರಜ್ಞಾನವನ್ನು ಸರ್ಕಾರ ಈ ಬಾರಿ ರಾಜ್ಯ ವ್ಯಾಪಿ ವಿಸ್ತರಣೆ ಮಾಡಿದೆ. ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ದೇಶದ ಎರಡನೇ ಅತ್ಯುತ್ತಮ ಕೇಂದ್ರವಾಗಿ ಹೊರಹಮ್ಮಿದೆ ಎಂದು ಡಾ.ಎಂ.ಹನುಮಂತಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿ ರಿಜಿಸ್ಟ್ರಾರ್ ಡಾ.ಎಂ.ವೀರನಗೌಡ, ಸಂಶೋಧನ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಎಸ್.ವಿ.ಗೌಡಪ್ಪ, ಆಡಳಿತಾಕಾರಿ ಡಾ.ಜಾಗೃತಿ ದೇಶಮಾನೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net