

ದೇವದುರ್ಗ: ಹಿರಿಯರು ಹೇಳುವಂತೆ ನೂಲಿನಂತೆ ದಾರ, ಬಿತ್ತನೆ ಬೀಜದಂತೆ ಬೆಳೆ ಎಂಬ ಮಾತು ಅಕ್ಷರಶಃ ಸತ್ಯ. ರೈತರು ಯಾವುದೇ ಬೆಳೆ ಬಿತ್ತನೆ ಮಾಡುವ ಮುನ್ನ ನುರಿತ ರೈತರು, ವಿಜ್ಞಾನಿಗಳ ಸಲಹೆ ಪಡೆದು ಗುಣಮಟ್ಟದ ಬಿತ್ತನೆ ಬೀಜ ಆಯ್ಕೆ ಮಾಡಬೇಕು ಎಂದು ರಾಯಚೂರು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಜೆ.ಎಂ.ನಿಡಗುಂದಿ ತಿಳಿಸಿದರು.
ತಾಲೂಕಿನ ಹೇಮನೂರು ಗ್ರಾಮದಲ್ಲಿ ರಾಯಚೂರು ಕೃಷಿ ವಿಜ್ಞಾನ ವಿವಿ, ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ, ಕೃಷಿ ಸಂಶೋಧನಾ ಕೇಂದ್ರ ಹಾಗೂ ದೇವದುರ್ಗ ಕೃಷಿ ವಿಸ್ತರಣಾ ಕೇಂದ್ರದಿಂದ ಆಯೋಜಿಸಿದ್ದ ಹತ್ತಿ ಬೆಳೆಯ ಬೇಸಾಯಿ ನಿರ್ವಹಣೆ ಪದ್ಧತಿ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಹತ್ತಿ ಬಿತ್ತನೆಗೆ ಮುನ್ನ ಬೀಜೋಪಚಾರ ಮಾಡಿದರೆ ಉತ್ತಮ ಇಳವರಿ ಪಡೆಯಬಹುದು ಎಂದರು.
ಕೀಟಶಾಸ್ತ್ರದ ವಿಜ್ಞಾನಿ ಡಾ.ಎಸ್.ಜಿ.ಹಂಚಿನಾಳ ಮಾತನಾಡಿ, ಹತ್ತಿಯಲ್ಲಿ ರಸಹೀರುವ ಕೀಟಗಳ ಬಗ್ಗೆ ರೈತರು ಎಚ್ಚರ ವಹಿಸಬೇಕು. ಇವು ಕಣ್ಣಿಗೆ ಕಾಣದಿದ್ದರೂ ಒಳಗೊಳಗೆ ಬೆಳೆಗಳ ಕುಂಠಿತಗೊಳಿಸುತ್ತವೆ. ಇಂತಹ ಸಮಯದಲ್ಲಿ ನಿರ್ಲಕ್ಷ್ಯ ಮಾಡದೆ ಬೆಳೆ ನಿರ್ವಹಣೆ ಮಾಡಬೇಕು. ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಿ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡಿದರು.
ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ.ಎಂ.ವೈ.ಅಜಯಕುಮಾರ ಮಾತನಾಡಿದರು. ಡಾ.ದೇವೇಂದ್ರ ಬೀರಲದಿನ್ನಿ, ವಿಷಯ ತಜ್ಞ ಡಾ.ಕೃಷ್ಣ ಬಿರಾದಾರ್, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ಸಿದ್ದಾರೆಡ್ಡಿ, ಕೃಷಿ ಅಧಿಕಾರಿ ಖಾಜಾ ಬಂದೇನವಾಜ್, ಭೀಮರೆಡ್ಡಿ ದೇಶಪಾಂಡೆ, ರವಿಕುಮಾರ, ಸಂತೋಷ ಇದ್ದರು.