ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಲ್ಲೇ ವಿದ್ಯುತ್ ಪೂರೈಸಿ: ಹಡಗಲಿಯಲ್ಲಿ ಜೆಸ್ಕಾಂ ಎಇಇ ಭಾಸ್ಕರ್‌ಗೆ ರೈತರ ಮನವಿ

Hadagali Farmers Appea for Electrict
ಹೂವಿನಹಡಗಲಿಯಲ್ಲಿ ಜೆಸ್ಕಾಂ ಎಇಇ ಭಾಸ್ಕರ್‌ಗೆ ಮಂಗಳವಾರ ರೈತರು ಮನವಿ ಸಲ್ಲಿಸಿದರು.
Published on

ಹೂವಿನಹಡಗಲಿ: ತಾಲೂಕಿನ ಮಿರಾಕೊರನಹಳ್ಳಿ, ದೇವಗೊಂಡನಹಳ್ಳಿ ಸೇರಿದಂತೆ ಇತರ ಗ್ರಾಮಗಳ ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ಬದಲಿಗೆ ಹಗಲು ಹೊತ್ತು ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಮಂಗಳವಾರ ಜೆಸ್ಕಾಂ ಎಇಇ ಭಾಸ್ಕರ್‌ಗೆ ಮನವಿ ಸಲ್ಲಿಸಿತು.

ಸಂಘದ ತಾಲೂಕು ಅಧ್ಯಕ್ಷ ಅಂಚಿ ಮಂಜುನಾಥ ಮಾತನಾಡಿ, ತಾಲೂಕಿನ ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ 3 ರಿಂದ ಬೆಳಗ್ಗೆ 10ರವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 12 ಗಂಟೆವರೆಗೆ ಎರಡು ಪಾಳಿಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಕಾಡು ಪ್ರಾಣಿಗಳು, ಹುಳು ಹುಪ್ಪಡಿಗಳ ಕಾಟ ಹೆಚ್ಚು. ಹೀಗಾಗಿ ಹಗಲು ಹೊತ್ತಿನಲ್ಲಿ ತ್ರಿಫೇಸ್ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಎಇಇ ಭಾಸ್ಕರ್ ಮಾತನಾಡಿ, ನನಗೂ ರೈತರ ಸಮಸ್ಯೆ ಗೊತ್ತಿದೆ. ಈಗ ಹೊಸ ವಿದ್ಯುತ್ ಪರಿವರ್ತಕ ಅಳವಡಿಕೆ ಕಾರ್ಯ ನಡೆದಿದ್ದು, ಇನ್ನೊಂದು ವಾರದಲ್ಲಿ ಹಗಲಿನಲ್ಲೇ ವಿದ್ಯುತ್ ಪೂರೈಕೆ ಮಾಡಲಾಗುವುದೆಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net