

ರಾಯಚೂರು: ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಸ್ಥಳೀಯ ರಾಜೇಂದ್ರ ಗಂಜ್‌ನಲ್ಲಿರುವ ವರ್ತಕರು ಪ್ರತಿಭಟನೆ ನಡೆಸಿದ್ದರಿಂದ ಗುರುವಾರ ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿತು.
ಈ ಹಿಂದೆ 1.50 ರೂ. ಇದ್ದ ಮಾರುಕಟ್ಟೆ ಶುಲ್ಕವನ್ನು 35 ಪೈಸೆಗೆ ಇಳಿಕೆ ಮಾಡಲಾಗಿತ್ತು. ಜತೆಗೆ ಮಾರುಕಟ್ಟೆ ಹೊರಗೆ ನಡೆಯುವ ವಹಿವಾಟಿಗೆ ಯಾವುದೇ ಶುಲ್ಕವನ್ನು ವಿಧಿಸಿರಲಿಲ್ಲ. ಆದರೆ ಸರ್ಕಾರ ಪುನಃ ಮಾರುಕಟ್ಟೆ ಶುಲ್ಕವನ್ನು ಗುರುವಾರದಿಂದ 1 ರೂ.ಗೆ ಹೆಚ್ಚಳ ಮಾಡಿದೆ. ಇದನ್ನು ಖಂಡಿಸಿ ಗಂಜ್ ವರ್ತಕರ ಸಂಘ ವಹಿವಾಟು ಸ್ಥಗಿತಗೊಳಿಸಲು ನಿರ್ಧರಿಸಿದ್ದರಿಂದ ಎಪಿಎಂಸಿಯಲ್ಲಿ ಟೆಂಡರ್ ಪ್ರಕ್ರಿಯೆ ಹಾಗೂ ಖರೀದಿ ಪ್ರಕ್ರಿಯೆ ಸ್ಥಗಿತಗೊಳ್ಳುವಂತಾಗಿತ್ತು. ಮಾರುಕಟ್ಟೆ ಶುಲ್ಕವನ್ನು ಹೆಚ್ಚಿಸುವ ಮೂಲಕ ವರ್ತಕರು ಮತ್ತು ರೈತರಿಗೆ ಆರ್ಥಿಕ ಹೊರೆ ಉಂಟು ಮಾಡಲಾಗುತ್ತಿದೆ ಎಂದು ವರ್ತಕರು ದೂರಿದರು.
ಖರೀದಿ ಪ್ರಕ್ರಿಯೆ ನಡೆಯದ ಕಾರಣ ಗ್ರಾಮಾಂತರ ಪ್ರದೇಶದಿಂದ ಭತ್ತ, ತೊಗರಿ, ಸೇಂಗಾ ಮಾರಾಟಕ್ಕೆ ತಂದಿರುವ ರೈತರು ಸಂಕಷ್ಟ ಎದುರಿಸುವಂತಾಗಿದ್ದು, ಚೀಲಗಳಲ್ಲಿ ತಂದ ಉತ್ಪನ್ನಗಳನ್ನು ಅಂಗಡಿಗಳ ಮುಂದೆ ಇಟ್ಟು ಕುಳಿತುಕೊಳ್ಳುವಂತಾಗಿತು.