

ರವೀಂದ್ರ ಕೋಟ
ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳ ಮಧ್ಯೆಯೂ ರೈತರು ಕೃಷಿ ಕೆಲಸ ಬಿಟ್ಟಿಲ್ಲ ಎಂಬುದಕ್ಕೆ ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣೂರು ಪಡುಕರೆ ಹಾಗೂ ಕಾಸನಗುಂದು ಕದ್ರಿಕಟ್ಟು ಕೃಷಿ ಭೂಮಿ ಸಾಕ್ಷಿ.
ಇಲ್ಲಿನ 200 ಎಕರೆ ಕೃಷಿ ಪ್ರದೇಶ ಸಂಪರ್ಕಿಸಲು ರೈತರು ಕಷ್ಟಪಟ್ಟು ಸಾಗಬೇಕು. ಅನೇಕ ವರ್ಷಗಳಿಂದ ಎರಡು ಗದ್ದೆಗಳ ಮಧ್ಯೆ ಹರಿಯುವ ಕಿರಿದಾದ ಹೊಳೆ ದಾಟಿ ಕೃಷಿ ಮಾಡಿ ಜೀವನ ಸಾಗಿಸಬೇಕಾದ ಪರಿಸ್ಥಿತಿ ಇಲ್ಲಿನ ರೈತರದ್ದು. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ ದಾಟಿ ಕೃಷಿ ಮಾಡಬೇಕು. ಕಾಲುಸಂಕವೂ ಇಲ್ಲದೆ ಹೊಳೆಗಿಳಿದು ಕಂಠ ಮಟ್ಟವರೆಗಿನ ನೀರಿನಲ್ಲೇ ಬೇಸಾಯಕ್ಕೆ ಬೇಕಾದ ಸಾಮಗ್ರಿ ಹೊತ್ತು ದಾಟಬೇಕು.
ಈ ಬದಿಯ ಗದ್ದೆಯಲ್ಲಿ ಬೆಳೆದ ನೇಜಿಯನ್ನು ಹೊಳೆಯ ಮತ್ತೊಂದು ಬದಿಯ ಗದ್ದೆಗೆ ತಲೆಯಲ್ಲಿ ಹೊತ್ತು ಸಾಗುವ ಸ್ಥಿತಿಯಿದೆ.
ಈ ಕಿರು ಹೊಳೆಗೆ ಕಾಲುಸಂಕ ಅಥವಾ ವೆಂಟೆಡ್ ಡ್ಯಾಮ್ ನಿರ್ಮಿಸಲು ಅನೇಕ ಬಾರಿ ಸ್ಥಳೀಯ ಪಂಚಾಯಿತಿ ಮತ್ತು ಜನಪ್ರತಿನಿಧಿಗಳನ್ನು ರೈತರು ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ.
ಹೋರಾಟದ ಎಚ್ಚರಿಕೆ: ಇಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ಹಲವು ಬಾರಿ ವರದಿ ಬಿತ್ತರಿಸಿದರೂ ಜನಪ್ರತಿನಿಧಿಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಿರುಹೊಳೆಗೆ ಶೀಘ್ರ ಕಾಲು ಸೇತುವೆ ನಿರ್ಮಿಸದಿದ್ದರೆ ಹೋರಾಟದ ಹಾದಿ ತುಳಿಯಬೇಕಾದಿತು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಪ್ರತಿವರ್ಷ ಮಳೆಗಾಲದಲ್ಲಿ ರೈತರಿಗೆ ಎದುರಾಗುವ ಸಮಸ್ಯೆ ಬಗೆಹರಿಸಲು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸ್ಥಳೀಯ ಶಾಸಕರಿಗೆ, ಸಚಿವರಿಗೆ, ಜಿಪಂಗೆ ಮಾದರಿ ಕಳುಹಿಸಲಾಗುತ್ತಿದೆ. ಮುಂದಿನ ವರ್ಷ ಉದ್ಯೋಗ ಖಾತ್ರಿ ಯೋಜನೆಯಡಿ ಹೊಳೆಯ ಹೂಳೆತ್ತಿ ನೀರು ಸರಾಗ ಹರಿಯಲು ವ್ಯವಸ್ಥೆ ಮಾಡಲಾಗುವುದು. ಕಾಲುಸಂಕ ರಚನೆಗೂ ಕ್ರಮ ಕೈಗೊಳ್ಳಲಾಗುವುದು. 10 ಲಕ್ಷ ರೂ. ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ. - ಸುರೇಶ್ ಬಂಗೇರ, ಕೋಟ ಪಂಚಾಯಿತಿ ಪಿಡಿಒ ಕಾಲುಸಂಕ ನಿರ್ಮಾಣ ಸಂಬಂಧ ಇಲ್ಲಿನ ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಜತೆ ಸೇರಿ ನಿರಂತರ ಹೋರಾಟ ಮಾಡಲಾಗಿದೆ. ಹಿಂದಿನ ಸಂಸದ ಜಯಪ್ರಕಾಶ್ ಹೆಗ್ಡೆ ಅವರಲ್ಲಿ ಮನವಿ ಇಟ್ಟಿದ್ದು, ಕಾರಣಾಂತರಗಳಿಂದ ಇಲ್ಲಿಗೆ ಬಂದ ಕಾಲುಸಂಕ ಬೇರೆಡೆ ಸ್ಥಳಾಂತರಿಸಲಾಗಿದೆ. ಶಾಸಕರು, ಸಂಸದರು, ಸಚಿವರ ಗಮನಕ್ಕೆ ತಂದು ಕಾಲು ಸಂಕ ರಚಿಸಿ ರೈತರ ಸಮಸ್ಯೆ ಬಗೆಹರಿಸಲಾಗುವುದು. - ಭುಜಂಗ ಗುರಿಕಾರ, ಮಣೂರು ಪಡುಕರೆ ಕೋಟ ಗ್ರಾಪಂ ಸದಸ್ಯ