ಕೃಷಿ ಅಧಿಕಾರಿಗಳೇ ರೈತರ ಸಮಸ್ಯೆ ಪರಿಹರಿಸಿ

12bnk2
ವನ ಶ್ರೀಲಕ್ಷ್ಮಣ್ ಗೌಡ
Published on

ಬಣಕಲ್: ರೈತರ ಪಹಣಿಗಳಲ್ಲಿ ಬೆಳೆ ಕಾಲಂ ಇಲ್ಲದೇ ರೈತರು ಬೆಳೆ ವಿಮೆ ಪಡೆಯಲು ಪರದಾಡುತ್ತಿದ್ದು, ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ರೈತರ ಸಭೆ ನಡೆಸಿ ಸಮಸ್ಯೆ ಬಗೆ ಹರಿಸಬೇಕು ಎಂದು ರೈತ ಸಂಘದ ರಾಜ್ಯ ಮಹಿಳಾ ಉಪಾಧ್ಯಕ್ಷೆ ವನಶ್ರೀಲಕ್ಷ್ಮಣ್‌ಗೌಡ ಒತ್ತಾಯಿಸಿದ್ದಾರೆ.
ಬೆಳೆ ವಿಮೆ ಎಲ್ಲಿ ಕಟ್ಟಬೇಕು ಎಂದು ರೈತರು ಗೊಂದಲದಲ್ಲಿದ್ದಾರೆ. ಬ್ಯಾಂಕ್‌ನಲ್ಲಿ ಕೇಳಿದರೆ ಸರ್ವರ್ ಸಮಸ್ಯೆ ಎನ್ನುತ್ತಾರೆ. ಇನ್ನು ರೈತರ ಪಹಣಿಗಳಲ್ಲಿ ಬೆಳೆ ಕಾಲಂ ನೋಂದಾಯಿಸಿದರೂ ಸೇರ್ಪಡೆಯಾಗುತ್ತಿಲ್ಲ. ಮೊದಲು ಗ್ರಾಮ ಸಹಾಯಕರು ಸಮೀಕ್ಷೆ ನಡೆಸಿ ಬೆಳೆ ಸರ್ವೇ ಮಾಡುತ್ತಿದ್ದರು. ಅವರೂ ಈಗ ಸರ್ವೇ ಮಾಡುತ್ತಿಲ್ಲ .ಪ್ರತಿ ವರ್ಷ ಬೆಳೆ ಕಾಲಂ ಸೇರಿಸಿದರೂ ಬರುವ ವರ್ಷ ಪಹಣಿಯಲ್ಲಿ ಬೆಳೆ ಕಾಲಂ ಮಾಯವಾಗುತ್ತದೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.
ಅಧಿಕಾರಿಗಳಲ್ಲಿ ಕೇಳಿದರೆ ನಿಮ್ಮ ಮೊಬೈಲ್‌ನಲ್ಲಿ ಬೆಳೆ ಕಾಲಂ ಸೇರಿಸಬಹುದು ಎಂದು ಹೇಳಿ ನುಣುಚಿಕೊಳ್ಳುತ್ತಾರೆ.ನಾವು ಮೊಬೈಲ್ ಆ್ಯಫ್‌ನಲ್ಲಿ ಪ್ರಯತ್ನಿಸಿದರೆ ಅದು ಪಾಸ್ ವರ್ಡ್ ಕೇಳುತ್ತದೆ. ಆ್ಯಫ್ ನಿಯಂತ್ರಣ ಅಧಿಕಾರಿಗಳಲ್ಲೇ ಇರುವುದರಿಂದ ಅಧಿಕಾರಿಗಳು ಸ್ಪಂದಿಸಬೇಕು. ಪ್ರತಿ ವಷರ್ವೂ ಅಧಿಕಾರಿಗಳು ಸಭೆ ನಡೆಸಿ ರೈತರ ಕುಂದು ಕೊರತೆ ಆಲಿಸಿ ಬಗೆಹರಿಸುವ ಪ್ರಯತ್ನ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ತಾಲೂಕು ಕಚೇರಿಯಲ್ಲಿ ರೈತರ, ಸಾರ್ವಜನಿಕರ ಯಾವುದೇ ಕೆಲಸಗಳು ಆಗುತ್ತಿಲ್ಲ. ಮಲೆನಾಡು ಭಾಗದಲ್ಲಿ ರೈತರು ಅಡಕೆ, ಕಾಳುಮೆಣಸು, ಕಾಫಿ ಬೆಳೆಗೆ ಅವಲಂಬಿತರಾಗಿದ್ದಾರೆ. ಈ ಬಾರಿ ಮಳೆ ಹೆಚ್ಚಾಗಿ ಕಾಫಿಗಿಡದಲ್ಲಿ ಕೊಳೆ ರೋಗ ಉಂಟಾಗಿದೆ. ಇದರಿಂದ ಬೆಳೆ ವಿಮೆ ಅನಿವಾರ್ಯ. ಬೆಳೆ ವಿಮೆ ಕಟ್ಟದಿದ್ದರೆ ರೈತರು ಪರಿಹಾರ ಪಡೆಯಲು ಯಾರನ್ನು ಕೇಳಬೇಕು. ಬೆಳೆ ವಿಮೆ ಬಗ್ಗೆ ಬ್ಯಾಂಕ್‌ಗಳಲ್ಲೂ ಸರಿಯಾದ ಮಾಹಿತಿಯಿಲ್ಲ ಎಂದು ಆರೋಪಿಸಿದ್ದಾರೆ.
ಬೆಳೆ ವಿಮೆ ಕಟ್ಟಲು ಜುಲೈ 30 ಕೊನೆ ದಿನ ಎನ್ನುತ್ತಾರೆ. ಆದರೆ ಬೆಳೆ ವಿಮೆ ಕಟ್ಟಲು ಇನ್ನೂ ಸಾಧ್ಯವಾಗುತ್ತಿಲ್ಲ. ಬೆಳೆವಿಮೆ ನೋಂದಾಯಿಸಲು ದೀರ್ಘ ಸಮಯ ನೀಡಬೇಕು. 2019ರಲ್ಲಿ ಕೃಷಿ ಭೂಮಿ ಖರೀದಿಸಿದ ರೈತರಿಗೆ ಪಿಎಂಕಿಸಾನ್ ಅನುದಾನ ಈವರೆಗೂ ಸಿಗುತ್ತಿಲ್ಲ. ಆದ್ದರಿಂದ ಕೃಷಿ , ತೋಟಗಾರಿಕೆ ಹಾಗೂ ಕಂದಾಯ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ರೈತರ ಸಭೆ ನಡೆಸಿ ರೈತರಿಗೆ ಸರಿಯಾದ ಮಾಹಿತಿ ನೀಡಬೇಕು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net