

ಕಾರ್ಗಲ್: ಜೋಗದ ಬ್ರಿಡ್ಜ್ ಕ್ಯಾಂಪ್ ಸಮೀಪದ ದೇವಿಗುಂಡಿ ಬಳಿ ಭಾನುವಾರ ಈಜಲು ತೆರಳಿ ಸಾಗರದ ಕೃಷಿ ಅಧಿಕಾರಿ ಮತ್ತು ಬ್ಯಾಂಕ್ ನೌಕರ ನೀರುಪಾಲಾಗಿದ್ದಾರೆ.
ಸಾಗರದ ಕೃಷಿ ಅಧಿಕಾರಿ ತಾಂತ್ರಿಕ-1 ಕೆ.ಪಿ.ಕುಮಾರ್ (35) ಮತ್ತು ಐಡಿಎಫ್‌ಸಿ ಬ್ಯಾಂಕ್ ಕಲೆಕ್ಟರ್, ತುಮಕೂರು ಜಿಲ್ಲೆ ಕೊರಟಗೆರೆಯ ಅರುಣ್ (29) ಮೃತರು. ಕುಮಾರ್ ಅವರು ತಮ್ಮ ಕುಟುಂಬ ಸಮೇತ ಸ್ನೇಹಿತ ಅರುಣ್ ಜತೆಯಲ್ಲಿ ಪಿಕ್‌ನಿಕ್‌ಗೆಂದು ಅತ್ಯಂತ ಅಪಾಯಕಾರಿ ಸ್ಥಳವಾದ ದೇವಿಗುಂಡಿ ಬಳಿಯಲ್ಲಿರುವ ಕಲ್ಲುಕ್ವಾರಿಗೆ ಆಗಮಿಸಿದ್ದರು. ಅರುಣ್ ಅವರು ಈ ಹಿಂದೆ ಇಲ್ಲಿಗೆ ಬಂದು ಹೋಗಿದ್ದು ಸ್ಥಳದ ಬಗ್ಗೆ ಮಾಹಿತಿ ಹೊಂದಿದ್ದರು. ಹಾಗಾಗಿ ಸ್ನೇಹಿತನ ಕುಟುಂಬಸ್ಥರನ್ನು ಕರೆದುಕೊಂಡು ಭಾನುವಾರ ಇಲ್ಲಿಗೆ ಬಂದಿದ್ದರು. ಒಟ್ಟು ಏಳೆಂಟು ಜನರು ಬಂದಿದ್ದು ಈ ಪೈಕಿ ಒಬ್ಬರದು ಜನ್ಮದಿನವಿತ್ತು ಎನ್ನಲಾಗಿದೆ. ಅರುಣ್ ಮೊದಲು ನೀರಿಗೆ ಇಳಿದು ಈಜಿದ್ದಾನೆ. ಈತ ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲಿ ಕುಮಾರ್ ಅವರು ಕಾಪಾಡಲು ಇಳಿದಿದ್ದಾನೆ. ಆದರೆ ಇಬ್ಬರೂ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ. ಕುಮಾರ್ ಅವರಿಗೆ ಮದುವೆ ಆಗಿದ್ದು ಮಗಳಿದ್ದಾಳೆ.
ಮಾಹಿತಿ ತಿಳಿದು ಕಾರ್ಗಲ್ ಪಿಎಸ್‌ಐ ಹೊಳೆಬಸಪ್ಪ, ಸಿಬ್ಬಂದಿ ಸ್ಥಳಕ್ಕೆ ತೆರಳಿ ಸ್ಥಳೀಯ ಈಜುಗಾರರನ್ನು ಬಳಸಿ ನೀರಿಗೆ ಇಳಿಸಿ ಹುಡುಕಿಸಿ ಮೃತದೇಹವನ್ನು ತೆಗೆಸಿದ್ದಾರೆ. ಕಾನೂನು ಪ್ರಕ್ರಿಯೆ ಮುಗಿಸಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.
ಈ ದೇವಿಗುಂಡಿ ತಲಕಳಲೆ ಡ್ಯಾಮ್‌ನಿಂದ ನೀರು ಬರುವ ಸ್ಥಳವಾಗಿದ್ದು ಇಲ್ಲಿ ಡ್ಯಾಮ್ ಕಟ್ಟಲು ಕಲ್ಲು ತೆಗೆಯಲಾಗಿತ್ತು. ಇಲ್ಲಿ ಜನಸಂಚಾರ ಕಡಿಮೆ ಇದ್ದು ಇದರಿಂದಾಗಿ ರಕ್ಷಣಾ ಕಾರ್ಯಾಚರಣೆ ತಡವಾಯಿತು.