

ಬ್ಯಾಡಗಿ: ರೈತರಿಗೆ ಕೃಷಿ ಯಂತ್ರಗಳನ್ನು ಬಾಡಿಗೆ ನೀಡಲು ಜಾರಿಗೆ ತರಲಾಗಿರುವ ಕೃಷಿ ಯಂತ್ರಧಾರೆ ಹೆಸರಿನಲ್ಲಿ ರಾಜ್ಯ ಸರ್ಕಾರಕ್ಕೆ 52.83 ಲಕ್ಷ ರೂ. ವಂಚನೆ ಮಾಡಲಾಗಿದ್ದು, ಇಬ್ಬರು ಉದ್ಯಮಿದಾರರ ವಿರುದ್ಧ ಬ್ಯಾಡಗಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎಸ್.ವಿ. ರಾಜು ಹಾಗೂ ರಮೇಶ ಕೆ.ಎಂ. ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು. ಇವರ ವಿರುದ್ಧ ಬ್ಯಾಡಗಿ ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ದೂರು ನೀಡಿದ್ದಾರೆ.
ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪಿಸಲು ಕೃಷಿ ಇಲಾಖೆಯಿಂದ ಅಜಿರ್ ಆಹ್ವಾನಿಸಲಾಗಿತ್ತು. ಕೇಂದ್ರ ಸ್ಥಾಪಿಸುವ ಕಂಪನಿಗಳಿಗೆ ಸಹಾಯಧನ ನೀಡುವುದಾಗಿ ತಿಳಿಸಲಾಗಿತ್ತು. ಚಿತ್ರದುರ್ಗದ ಕೆಳಗೋಟೆಯಲ್ಲಿರುವ ವರ್ಷಾ ಅಸೋಸಿಯೇಟ್ ಕಂಪನಿ ಎಸ್. ವಿ. ರಾಜು ಹಾಗೂ ಆಯ್ಕೆ ಅಗ್ರಿ ಬ್ಯುಸಿನೆಸ್ ಸೆಂಟರ್ ಫಾರ್ ಡೆವೆಲೆಪ್ಮೆಂಟ್ ನಿರ್ದೇಶಕ ರಮೇಶ ಕೆ.ಎಂ ಅವರು ಕೇಂದ್ರ ಸ್ಥಾಪಿಸಲು ಆಸಕ್ತಿ ತೋರಿಸಿ ಅಜಿರ್ ಸಲ್ಲಿಸಿದ್ದರು.
ಅವರಿಬ್ಬರಿಗೂ ಕೇಂದ್ರ ಸ್ಥಾಪಿಸಲು ಅನುಮತಿ ನೀಡಿದ್ದ ಕೃಷಿ ಇಲಾಖೆ ಅಧಿಕಾರಿಗಳು, 50.83 ಲಕ್ಷ ರೂ. ಸಹಾಯ ಧನ ನೀಡಿದ್ದರು. ಹಣ ಪಡೆದಿದ್ದ ಆರೋಪಿಗಳು, ಕೇಂದ್ರ ಸ್ಥಾಪಿಸಿಲ್ಲವೆಂಬುದು ಅಂತರಿಕ ತನಿಖೆಯಿಂದ ಗೊತ್ತಾಗಿದೆ. ಕೆಲ ಯಂತ್ರಗಳನ್ನು ಬೇರೆಡೆ ಸಾಗಿಸಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.