ರೈತರು ಬೆಳೆಗೆ ವಿಮೆ ಮಾಡಿಸಲಿ: ಶಾಸಕ ರವಿಕುಮಾರ್ ಗಣಿಗ ಸಲಹೆ

Agricultural machinery distribution Mandya
Published on

ಮಂಡ್ಯ: ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬರುವ ಬೆಳೆಗಳನ್ನು ಬೆಳೆಯಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಕೃಷಿ ಇಲಾಖೆ ಹಾಗೂ ಪಶುಪಾಲನೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ರೈತರಿಗೆ 2024-25ನೇ ಸಾಲಿನ ಕೃಷಿ ಯಂತ್ರೋಪಕರಣ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ವಿನೂತನ ಮಾದರಿಯ ವ್ಯವಸಾಯ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ವಿತರಣೆ ಮಾಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ. ಕೃಷಿ ಯಾಂತ್ರೀಕರಣ ಅಳವಡಿಸಿ ಕೊಂಡು ಯಾವ ರೀತಿಯ ವ್ಯವಸಾಯ ಪದ್ಧತಿಗಳನ್ನು ಅನುಸರಿಸಬಹುದು ಎಂಬುವುದರ ಬಗ್ಗೆ ರೈತರು ಮಾಹಿತಿ ಪಡೆದುಕೊಳ್ಳಿ ಎಂದರು.

ರೈತರು ಬೆಳೆ ವಿಮೆ ಮಾಡಿಸಿಕೊಳ್ಳಿ. 700 ರೂ ಪಾವತಿಸಿ ಒಂದು ಎಕರೆಗೆ ಬೆಳೆ ವಿಮೆ ಮಾಡಿಸಿದರೆ ಬೆಳೆ ಹಾನಿಯಾದ ಸಂದರ್ಭದಲ್ಲಿ 39 ಸಾವಿರ ರೂ.ವರೆಗೂ ಪರಿಹಾರ ಸಿಗುತ್ತದೆ. ನೀರಾವರಿ ಯೋಜನೆಗೆ 100 ಕೋಟಿ ರೂ ಯೋಜನೆ ರೂಪಿಸಿದ್ದು, ಈಗಾಗಲೇ 7 ಕೋಟಿ ರೂ ಮಂಜೂರಾಗಿದೆ. ಮುಂದಿನ ವಾರ ಕೆಲಸ ಪ್ರಾರಂಭಿಸಲಾಗುವುದು. ಬಸರಾಳಿಗೆ ಶ್ರೀರಂಗಪಟ್ಟಣದ ಕಾವೇರಿ ನದಿಯಿಂದ ನೀರು ತರಲು 250 ಕೋಟಿ ರೂ ವೆಚ್ಚದ ಯೋಜನೆ ರೂಪಿಸಲಾಗಿದೆ. ಈ ಭಾಗದ ಮೂರು ಗ್ರಾಪಂಗೆ ಕಾವೇರಿ ನೀರು ದೊರಕಲಿದ್ದು, ರೈತರಿಗೆ ನೀರು ಸಿಕ್ಕಿದರೆ ವ್ಯವಸಾಯಕ್ಕೆ ಅನುಕೂಲ ವಾಗುತ್ತದೆ ಎಂದು ಹೇಳಿದರು.

ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭತ್ತ ಖರೀದಿ ಕೇಂದ್ರವನ್ನು ಇನ್ನೂ ಹತ್ತು ದಿನದೊಳಗೆ ತೆರೆಯಲಾಗುವುದು. ರೈತರು ನೋಂದಣೆ ಮಾಡಿಸಿಕೊಳ್ಳಿ. ರೈತರ ಎರಡನೇ ಬೆಳೆಗೂ ಬೆಳೆ ಬೆಳೆಯಲು ನೀರು ಕೊಡುತ್ತೇವೆ. ಬೆಳೆ ಬೆಳೆದು ಉತ್ತಮ, ಸಮೃದ್ಧವಾಗಿ ರೈತರು ಜೀವನ ಸಾಗಿಸಲಿ ಎಂದು ಹಾರೈಸಿದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಸದಸ್ಯ ರವಿ, ಕೃಷಿ ಇಲಾಖೆ ಉಪ ನಿರ್ದೇಶಕ ಮುನಿಗೌಡ, ಸಹಾಯಕ ನಿರ್ದೇಶಕಿ ಸುನೀತಾ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net