

ಮಂಡ್ಯ: ಗ್ರಾಹಕರು ಬ್ಯಾಂಕಿನಿಂದ ದೊರೆಯುವ ಸೌಲಭ್ಯವನ್ನು ಪಡೆದು ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು. ಈ ಮೂಲಕ ಬ್ಯಾಂಕಿನ ಅಭಿವೃದ್ಧಿಗಾಗಿ ಸಹಕರಿಸಿ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಡಿಜಿಎಂ ವಿಕಾಸ್ ವಶಿಷ್ಠ ಮನವಿ ಮಾಡಿದರು.
ತಾಲೂಕಿನ ಕೆ.ಗೌಡಗೆರೆ ಗ್ರಾಮದ ಶ್ರೀರಾಮಮಂದಿರ ಆವರಣದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್, ಕೃಷಿ ವಾಣಿಜ್ಯ ಶಾಖೆ ಬಂದೀಗೌಡ ಬಡಾವಣೆ, ಹರ್ಷ ಸಮಾಜ ಸೇವಾ ಫೌಂಡೇಷನ್, ಸಾವಯವ ರೈತಕೂಟ ಕೆ.ಗೌಡಗೆರೆ ಸಹಯೋಗದಲ್ಲಿ ಆಯೋಜಿಸಿದ್ದ ಕೃಷಿ ಸಾಲಗಳ ಜಾಗೃತಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದ ಜನರು ಬ್ಯಾಂಕಿನೊಂದಿಗೆ ಹಣ ಕಟ್ಟುವ ಹಾಗೂ ಹಣ ಪಡೆದರೆ ಸಾಲ ಸೌಲಭ್ಯ ಸೇರಿದಂತೆ ಹಲವು ರೀತಿಯ ಯೋಚನೆಯ ಫಲಾನುಭವಿಗಳಾಗಲು ಸಾಧ್ಯವಾಗುತ್ತದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಬೇಕು ಎಂದು ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ಬೆಳೆಗಳಿಗೆ ವೆಚ್ಚ ಹೆಚ್ಚಾಗುತ್ತಿದ್ದು, ಇಳುವರಿ ಕಡಿಮೆಯಾಗುತ್ತಿದೆ. ಇದಕ್ಕೆ ಲಾಭದಾಯಕವಾಗಲು ರೈತರ ಬೆಳೆಗೆ ಬೇಕಾಗುವ ಸಲಕರಣೆಗಳನ್ನು ಸರ್ಕಾರದ ವತಿಯಿಂದ ಸಬ್ಸಿಡಿ ನೀಡುವ ಮೂಲಕ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ನಾಟಿ ಮಾಡುವ ಯಂತ್ರ ಕಟಾವು ಮಾಡುವ ಯಂತ್ರಗಳನ್ನು ರೈತ ಗುಂಪುಗಳ ಮೂಲಕ ವಿತರಿಸುತಿದ್ದೇವೆ. ಈ ಎಲ್ಲ ಸೌಲಭ್ಯಗಳನ್ನೂ ಬಳಸಿಕೊಂಡು ಅಭಿವೃದ್ಧಿ ಹೊಂದಲು ಸಹಕರಿಯಾಗುತ್ತದೆ ಎಂದು ಸಲಹೆ ನೀಡಿದರು.
ಬಿ.ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಬೋರಯ್ಯ, ಸದಸ್ಯೆ ಕೆ.ಸರಸ್ವತಿ, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಸುಮನ್, ಫೌಂಡೇಷನ್ ಅಧ್ಯಕ್ಷ ಕಾರಸವಾಡಿ ಮಹದೇವು ಇತರರಿದ್ದರು. ಇದೇ ವೇಳೆ ಬ್ಯಾಂಕಿನಿಂದ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿದ ಗ್ರಾಹಕರನ್ನು ಸನ್ಮಾನಿಸಲಾಯಿತು. ರೈತರಿಗೆ ಸಾಲದ ಚೆಕ್ ವಿತರಿಸಲಾಯಿತು.