ಕೈಗಾರಿಕೆ ಯೋಜನೆಗೆ ಕೃಷಿ ಭೂಮಿ ವಶ ಸಲ್ಲದು

SIRIGERE SWAMIJI 04
Published on

ಸಿರಿಗೆರೆ: ಕೃಷಿ ನಂಬಿ ಎಂಟತ್ತು ತಲೆಮಾರು ಜನರು ಬದುಕು ಕಟ್ಟಿಕೊಂಡಿರುತ್ತಾರೆ. ಆದರೆ, ಅಭಿವೃದ್ಧಿ ಹೆಸರಲ್ಲಿ ಕೃಷಿ ಭೂಮಿ ವಶಪಡಿಸಿಕೊಳ್ಳುವುದು ಸರಿಯಲ್ಲ ಎಂದು ತರಳಬಾಳು ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ತರಳಬಾಳು ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಆಶೀರ್ವದಿಸಿ ಮಾತನಾಡಿದರು.

ಕೈಗಾರಿಕೆ ಕಾರಿಡಾರ್ ಯೋಜನೆಗೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಬೇಡ. ಇದರಿಂದ ಆಹಾರ ಉತ್ಪಾದನೆ ಮೇಲೆ ದುಷ್ಪರಿಣಾಮ ಬೀರಲಿದೆ. ಕೈಗಾರಿಕೆ ಸ್ಥಾಪನೆ, ಅಭಿವೃದ್ಧಿ ಅಗತ್ಯ. ಆದರೆ, ಫಲವತ್ತಾದ ಭೂಮಿ ಬಳಸುವುದು ಅಪಾಯ ಎಂದರು.

ಕೃಷಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ ದಾವಣಗೆರೆ ಸಮೀಪದ ಮೆಳ್ಳೆಕಟ್ಟೆ, ಅಣಜಿ, ಲಿಂಗಾಪುರ ಮುಂತಾದ ಗ್ರಾಮಗಳ ರೈತರು ಸದ್ಧರ್ಮ ನ್ಯಾಯ ಪೀಠಕ್ಕೆ ಮನವಿ ಸಲ್ಲಿಸಿದ್ದರು. ದಾವಣಗೆರೆ ಸಮೀಪದ ಕೈಗಾರಿಕಾ ಕಾರಿಡಾರ್ ಉದ್ದೇಶಕ್ಕಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲು ಐಎಡಿಬಿ ಮುಂದಾಗಿದೆ. ನಮ್ಮ ರೈತರು ಜಮೀನಿನಲ್ಲಿ ಅಡಕೆ, ತೆಂಗು, ಮಾವು ಸೇರಿ ವಿವಿಧ ತೋಟಗಾರಿಕೆ ಕೃಷಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಸಚಿವರು ಮಾತನಾಡಿ, ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ಹೊಸ ಯೋಜನೆಗಳ ಅನುಷ್ಠಾನದ ಕುರಿತು ಜಾಗತಿಕ ಬಂಡವಾಳರ ಹೂಡಿಕೆದಾರರ ಸಮಾವೇಶವನ್ನು ಶೀಘ್ರದಲ್ಲೇ ಆಯೋಜಿಸಲಾಗುವುದು. ಅಂತರರಾಷ್ಟ್ರೀಯ ಹೂಡಿಕೆದಾರರೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net