ಅಕ್ಕಿ ಬಿಡುಗಡೆ ಮಾಡುವಂತೆ ಒತ್ತಾಯ: ಪ್ರಾಂತ ಕೃಷಿ ಕೂಲಿಕಾರರ ಪ್ರತಿಭಟನೆ

2 (1)
Published on

ಮಂಡ್ಯ: ಒಕ್ಕೂಟ ನೀತಿ ಅನ್ವಯ ಕೇಂದ್ರ ಸರ್ಕಾರ ಅಕ್ಕಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ನಗರದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಬಡವರ ಬವಣೆಗೆ ಸ್ಪಂದಿಸಿ ರಾಜ್ಯಸರ್ಕಾರ ಪ್ರತಿಯೊಬ್ಬರಿಗೂ ತಲಾ 10 ಕೆ.ಜಿ ಅಕ್ಕಿ ನೀಡಲು ತೀರ್ಮಾನಿಸಿದೆ. ಆದರೆ ಕೇಂದ್ರ ಸರ್ಕಾರ ಅಕ್ಕಿ ನೀಡದೇ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರಕ್ಕೆ ಅಕ್ಕಿ ಬಿಡುಗಡೆ ಮಾಡಬೇಕು. ಒಕ್ಕೂಟದಲ್ಲಿ ರೂಪಿತಗೊಂಡಿರುವ ಸಂವಿಧಾನದ ರಕ್ಷಣೆಯಾಗಬೇಕು. 1950ರಲ್ಲಿ ರಚಿಸಿರುವ ಗಣರಾಜ್ಯ ವ್ಯವಸ್ಥೆ ರಕ್ಷಣೆಯಾಗಬೇಕು. ಇದರೊಂದಿಗೆ ಐಕ್ಯ ಭಾರತ ಉಳಿಯಬೇಕು. ಒಕ್ಕೂಟದ ನೀತಿಯಂತೆ ರಾಜ್ಯ ನಿರ್ದೇಶಕ ತತ್ವಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು. ಆಯಾಯ ರಾಜ್ಯಗಳ ಪಾಲನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕು. ರೇಷನ್ ವಿತರಿಸಲು ಅನುಸರಿಸುತ್ತಿರುವ ಸರ್ವರ್ ವ್ಯವಸ್ಥೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಪುಟ್ಟಮಾದು, ಅಮಾಸಯ್ಯ, ರಾಜು, ಸಂತೋಷ, ಅಬ್ದುಲ್ಲಾ, ಮಂಜುಳಾ, ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net